Wednesday, February 4, 2009

ಕಣ್ಣ ಕಣಿವೆಗೆ ಎಚ್.ಎಸ್. ಶಿವ ಪ್ರಕಾಶ್ ಅವರು ಬರೆದ ಮುನ್ನುಡಿ


ಶ್ರೀಮತಿ ರೇಣುಕಾ ನಿಡುಗುಂದಿ ಅವರ ಚೊಚ್ಚಿಲು ಕವಿತಾಸಂಗ್ರಹಕ್ಕೆ ಮುನ್ನುಡಿ ಬರೆದುಕೊಡಿ ಎಂದು ದೆಹಲಿ ಕನ್ನಡ ಸಂಘದ ಅಧ್ಯಕ್ಷ ಡಾ. ಬಿಳಿಮಲೆ ಅವರು ಸ್ನೇಹಪೂರ್ವಕ ಆಗ್ರಹ ಮಾಡುತ್ತಿದ್ದಾರೆ. ಸ್ವತಃ ಬರಹಗಾರ್ತಿಯವರು ಅವರ ಮಾತಿಗೆ ದನಿಗೂಡಿಸಿದ್ದಾರೆ. ಒಲ್ಲೆ ಅನ್ನಲಾಗದೆ ಈ ಕೆಲವು ಮಾತುಗಳನ್ನು ಬರೆಯತೊಡಗಿದ್ದೇನೆ.
ಮುನ್ನುಡಿ ಆಶೀರ್ವಚನಗಳಿಂದ ಯಾವ ಕವಿಯೂ ಉಧ್ಧಾರವಾಗುವುದಿಲ್ಲ ಅಂತ ನನಗೆ ಗೊತ್ತಿದೆ. ಕವಿತೆ ತನ್ನನ್ನು ತಾನೇ ಕಾಯ್ದುಕೊಳ್ಳಬೇಕು ನಮ್ಮ ಗದ್ಯಮಯ ಯುಗದಲ್ಲಿ. ಕವಿತೆಗೆ ಬದ್ಧರಾದವರಿಗೆ ಭೌತಿಕವಾಗಿ ಇವೊತ್ತು ಸಿಕ್ಕೋದು ಅಷ್ಟಕ್ಕಷ್ಟೆ: ಚೂರುಪಾರು ತಾರೀಫು, ಅಪರೂಪಕ್ಕೆ ವಿಮರ್ಶಕರ ಮೆಚ್ಚುಮಾತು, ಲಾಬಿ ಮಾಡುವವರಿದ್ದರೆ ಯಾವುದೋ ಜುಜುಬಿ ಅಕಾಡೆಮಿ ಬಹುಮಾನ ಪ್ರಶಸ್ತಿ. ರಶ್ಯನ್ ಕವಯತ್ರಿ ಅನಾ ಅಖಮತೋವಾ ಕವಿತೆಯನ್ನು 'ಕೃತಘ್ಞ ಕಲೆ' ಅಂತ ಕರೆದಿದ್ದಳು. ಆ ಮಾತು ಎಂದಿಗಿಂತಲೂ ಇಂದು ನಿಜ.
ಹೀಗಾಗಿ ಕವಿತೆ ಅನ್ನೋದು ಇವೊತ್ತು ಅಂಥಾ ಫಾಯಿದೆ ತರುವ ಕೆಲಸವಲ್ಲ. ನಮ್ಮ ಜರೂರಿಗಾಗಿ ನಾವೇ ಕಟ್ಟಿಕೊಂಡ ಆಸೆಯ ಕನಸುಗಳ ಕಟ್ಟಡ, ಅಷ್ಟೆ. ಹೀಗೆ ನಮ್ಮ ಜರೂರಿಗಾಗಿ ನಾವೇ ಸೃಜಿಸಿದ್ದು ಇನ್ನೊಬ್ಬ ಸಹೃದಯನಿ/ಳಿಗೆ ತನ್ನದೆನಿಸಿದರೆ ಅದೇ ಅದರ ಸಾರ್ಥಕತೆ.
ಕಳೆದ ಕೆಲವು ದಶಕಗಳಲ್ಲಿ ಕನ್ನಡ ಕಾವ್ಯದಲ್ಲಿ ನನಗೆ ಹೊಸಾ ತೆರಪುಗಳು ಕಾಣುತ್ತಿರುವುದು ಹೆಂಗಸರು ಬರೆದ ಕಾವ್ಯದಲ್ಲಿ. ಇಲ್ಲಿ ನಾನು ಸಾಧ್ಯತೆಗಳ ಬಗ್ಗೆ ಮಾತಾಡುತ್ತಿದ್ದೇನೆಯೇ ಹೊರತು ಸಿಧ್ಧಿಯ ಬಗ್ಗೆ ಅಲ್ಲ.. ಯಾಕೆಂದರೆ ಕಾವ್ಯದ ಗಂಡು ಸಾಧ್ಯತೆಗಳು ಎಂದೋ ಬರಡಾಗಿ ಹೋಗಿವೆ. ಅದ್ದರಿಂದಲೆ ಏನೋ ಕಳೆದ ಕೆಲವು ದಶಕಗಳ ಕನ್ನಡ ಕವಿತೆಯ ಚಿರಂತನ ಸಾಲುಗಳು ಹೆಂಗರುಳಿನವಾಗಿವೆಯೇ ಹೊರತು ಗಂಡುಮೆಟ್ಟಿನವಾಗಿಲ್ಲ. ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಹೆಂಗಸರು ಕಾವ್ವ ರಚನೆಗೆ ತೊಡಗುತ್ತಿದ್ದಾರೆ. ಗಂಡು ಪೂರ್ವಾಗ್ರಹಗಳನ್ನು ಬುಡಸಮೇತ ಹಿಡಿದು ಅಲ್ಲಾಡಿಸುವ, ಹೆಂಬಯಕೆಗಳನ್ನು ಒಮ್ಮೆ ಮೆಲುದನಿಯಲ್ಲಿ ಒಮ್ಮೆ ಕಠೋರವಾಗಿ ಕೇಳಿಸಿಕೊಳ್ಳುವಂತೆ ಮಾಡುವ ಕವಿತೆಗಳು ಈ ಅವಧಿಯಲ್ಲಿ ಗಮನಾರ್ಹವಾಗಿ ಬಂದಿವೆ. ಕನ್ನಡ ಕಾವ್ಯದ ಕೊನೆಯ ವಿದ್ಯಾರ್ಥಿಯಾಗಿ ನಾನೂ ಅದರಿಂದ ಬಹಳ ಕಲಿತಿದ್ದೇನೆ. ಈ ಚೌಕಟ್ಟಿನಲ್ಲಿ ರೇಣುಕಾ ಅವರ ಕವಿತೆಗಳನ್ನು ಕೆಲವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ.
ಶ್ರೀಮತಿ ರೇಣುಕಾ ನಿಡಗುಂದಿ ಅವರ ಕವಿತೆಗಳಿಗೆ ಪ್ರವೇಶಿಕೆಯಾಗಿ ಈ ಕೆಳಗಿನ ಸಾಲುಗಳನ್ನು ಉದಾಹರಿಸುತ್ತಿದ್ದೇನೆ.

1)
ನೀನಗಲುವ ಮುನ್ನ ನನ್ನ ಅಂತಿಮ
ಯಾತ್ರೆಯಾಗಬಾರದಿತ್ತೆ ?
ಸಾವಿರಾರು ಜನ ನರಳುವ ಬದಲು
ನಾನೊಬ್ಬಳೇ ಆ ಭೋಪಾಲದ
ಭೀಕರತೆಗೆ ಸಿಗಬೇಕಿತ್ತು.
(ವೈರುಧ್ಯ)

2)
ಹಗಲ ಹೆತ್ತ ಮುಗಿಲು ಇನ್ನೂ ಹಸೀ ಬಾಣಂತಿ
ಎಳೆ ಎಳೆ ಬಿಸಿಲಿಗೆ ಮೈ ಕಾಸಿಕೊಳ್ಳುತ್ತಿದೆ.
(ಬೆಳಕು ಬಿತ್ತುವ ಕಾಲ)

ಈ ರೀತಿಯ ಸಾಲುಗಳು ಶ್ರೀಮತಿ.ರೇಣುಕಾ ನಿಡಗುಂದಿ ಅವರ ಕಾವ್ಯ ಸಾಮಥ್ರ್ಯದ ಮುಕುರಗಳಾಗಿವೆ. ಆದರೆ ಇಂಥ ಸಾರ್ಥಕತೆ ಎಲ್ಲ ಕವಿತೆಗಳಲ್ಲೂ ಸಮಾನವಾಗಿ ಸಂಭವಿಸುತ್ತದೆ ಎಂದಲ್ಲ. ಕಾವ್ಯಭéಾಷೆಯನ್ನು ಶಿಸ್ತುಬದ್ಧವಾಗಿ ಅಭ್ಯಾಸ ಮಾಡಿದ ಕವಿಯತ್ರಿ ಅವರಲ್ಲ. ಸಹಜ ಪ್ರತಿಭೆಯ ಸೆಳೆತದಿಂದ ಕಾವ್ಯದ ದಂಡೆಗೆ ಬಂದವರು. ಯಾವಾಗ ಭಾಷೆಯ ಎಚ್ಚರ ಮತ್ತು ತೀವ್ರತೆ ಕೈಕೊಡುತ್ತದೋ ಆವಾಗ ಅವರು 'ಪ್ರಕೃತಿ ಪ್ರಣಯ'ದಂಥ ಕವಿತೆಗಳನ್ನು ಬರೆದುಬಿಡುತ್ತಾರೆ. ಹಾಗಲ್ಲದ ಒಳ್ಳೆ ರಚನೆಗಳಲ್ಲೂ ಕೂಡ ಹಂಸಲೇಖಾಮಯ ಕ್ಲೀಷಾ ಪ್ರಪಂಚದ ಹಾಲು, ಚಂದಿರ, ಮಧು, ಜೀವನಪ್ರೀತಿ ಇತ್ಯಾದಿ ಸವಕಲು ಪ್ರತಿಮೆಗಳು ಕವಿತೆಯೊಳಗೆ ನುಸುಳಿಕೊಂಡು ಬಿಡುತ್ತವೆ. ಆದರೆ ಬಹುಪಾಲು ಕವಿತೆಗಳಲ್ಲಿ ಹಾಗಾಗುವುದಿಲ್ಲ. ಭಾವದ ಉತ್ಕಟತೆಯಿಂದಲೋ ಪ್ರತಿಭೆಯ ಪ್ರಭಾವದಿಂದಲೋ ಸಹಜವಾಗಿ ಕಾಣುವ ಈ ಕವಿತೆಗಳು ಸ್ವಯಂಪೂರ್ಣವಾದ ರೂಪಗಳನ್ನು ತಾಳಿ ಬರುತ್ತವೆ.
ಉದಾ : 'ನಾವಿಬ್ಬರೂ ನಮಗೊಂದೆ' ಕವಿತೆಯ ಪ್ರತಿಮಾ ಪ್ರಧಾನತೆ ; 'ನಿನ್ನ ನೆನಪು', 'ಜೋಡು ದೀಪ' ಕವಿತೆಗಳ ಭಾವಗೀತಾತ್ಮಕತೆ ; 'ನೀನಾದ ನಿನಾದ' ಮತ್ತು 'ಅಂತರ್ಯ' ಕವಿತೆಗಳ ಗುಂಗುಂನಾದ ; ಇದಕ್ಕಿಂತಲೂ ಮುಖ್ಯವಾಗಿ 'ಚಂದ್ರ ಮತ್ತು ಬುದ್ಧಪೂಣರ್ಿಮೆ', 'ಹಾರಿಹೋದ ಹಕ್ಕಿಗಳು' ಮತ್ತು ಬೆಳಕು ಬಿತ್ತುವ ಕಾಲ ಇತ್ಯಾದಿ ಕೊನೆಯ ಕವಿತೆಗಳ ಆತ್ಮ ನಿವೇದಾತ್ಮಕತೆ ಮತ್ತು ವ್ಯಾಪಕತೆ- ಇಷ್ಟೊಂದು ಕಾವ್ಯ ಸಾಧ್ಯತೆಗಳು ಮೊದಲ ಕವಿತಾ ಗುಚ್ಛದಲ್ಲೇ ಚಲ್ಲವರಿಯುವುದು ಯಾವುದೇ ಚೊಚ್ಚಿಲು ಸಂಕಲನದಲ್ಲಿ ತೀರಾ ಅಪರೂಪದ ಮಾತು. ಆದ್ದರಿಂದ ರೇಣುಕಾ ಅವರ ಕವನಗಳು ಅಭಿನಂದನೀಯ.
ಪ್ರಾಚೀನ ತಮಿಳು ಕಾವ್ಯ ಮೀಮಾಂಸೆ ಕಾವ್ಯದ ಎರಡು ತುದಿಗಳನ್ನು ಗುರುತಿಸಿತ್ತು. ಹೆಂಗಸಿನ ಜಗತ್ತಿನ ಒಳ ಕವಿತೆಯನ್ನು ಅಗಂ ಎಂದೂ, ಗಂಡು ತುರ್ತುಗಳ ಹೊರ ಕವಿತೆಯನ್ನು ಪುರಂ ಎಂದೂ ಕರೆಯಿತು. ಆದರೆ ಹಾಗೆ ಮಾಡಿದ್ದು ಬಿಚ್ಚು ನೋಟದ ಸಲೀಸಿಗಾಗಿ. ಒಳ ಕವಿತೆ ಹೊರ ತುರ್ತುಗಳಲ್ಲಿ ಮೈದಾಳದೇ ಹೋದರೆ, ಅಥವಾ ಹೊರಗವಿತೆ ಒಳ ತುಡಿತಗಳಿಂದ ಮಿಡಿಯದೇ ಹೋದರೆ ಕವಿತೆಯ ಜೀವ ದೇಹಗಳು ಒಂದಾಗುವುದಿಲ್ಲ. ಇತ್ತಿತ್ತಲಾಗಿನ ಕನ್ನಡ ಕಾವ್ಯದ ತೊಂದರೆ ಇರುವುದು ಇಲ್ಲಿಯೆ. ಕೆಲವು ಸಲ ಗೊಣಗುಡುವಿಕೆಯಾಗಿ ಇನ್ನು ಕೆಲವು ಸಲ ಅಬ್ಬರವಾಗಿ ಕವಿತೆ ಸೋತು ಬಿಡುತ್ತದೆ. ಆದರೆ ಶ್ರೀಮತಿ ರೇಣುಕಾ ಅವರು ಒಳ -ಹೊರಗುಗಳಿಂದನ್ನೂ ಕವಿತೆಯ ನೇಯ್ಗೆ ಒಳಗೆ ಹೆಣೆಯುತ್ತಿರುವುದರಿಂದ ಅವರು ತಮ್ಮ ಕಾವ್ಯಯಾತ್ರೆಯನ್ನು ಸರಿಯಾದ ರೀತಿಯಲ್ಲೇ ಶುರು ಮಾಡಿದ್ದಾರೆ ಎಂದು ನನ್ನ ನಂಬುಗೆ.
ಆದ್ದರಿಂದ ಅವರು ಕನ್ನಡ ಕಾವ್ಯದ ಮಂಡೆಗೆ ಹೂವು ತರುವರೇ ಹೊರತು ಹುಲ್ಲು ತರುವರಲ್ಲ.

- ಎಚ್ ಎಸ್ ಶಿವಪ್ರಕಾಶ

1 comment:

Veeranna Kumar said...

ಕಣ್ಣ ಕಣಿವೆಯ ತುಂಬಾ ಪ್ರೀತಿಯ ಕೆಂದಾವರೆ ಅರಳಿವೆ. ಕವಯಿತ್ರಿಗೆ ನೂರು ನಮನ.
ವೀರಣ್ಣ.
veerannakumar.wordpress.com