Thursday, April 30, 2009

ಪೈಲೂರು ಶಿವರಾಮಯ್ಯನವರ ಬದುಕು-ಪ್ರವೃತ್ತಿಗಳ ಸಾಹಸ ಕಥನ

ಸತತವಾಗಿ ಏನಾದರೂ ಮಾಡುತ್ತಲೇ ಇರುವ ಶಿವರಾಂ ಪೈಲೂರು ಅವರು ಈಗ ತಮ್ಮ ಅಜ್ಜ ಪೈಲೂರು ಶಿವರಾಮಯ್ಯನವರ ಬಗ್ಗೆ ಪುಸ್ತಕ ಹೊರ ತರುತ್ತಿದ್ದಾರೆ. ಆಹ್ವಾನ ಪತ್ರಿಕೆ ಇಲ್ಲಿದೆ. ಮಾಹಿತಿಗೆ ಶಿವರಾಂ ಪೈಲೂರು -94484-10077 ಇಲ್ಲಿಗೆ ಸಂಪರ್ಕಿಸಬಹುದು.

Wednesday, April 29, 2009

ಮಣಿಕಾಂತ್ ಬಯಲು ಮಾಡಿದ ಸುಳ್ಳುಗಳು

ಕೃಪೆ: ಅವಧಿ
ಎ ಆರ್ ಮಣಿಕಾಂತ್ ಬಗೆಗಿನ ಪ್ರೀತಿಗೆ ಕಲಾಕ್ಷೇತ್ರ ಸಾಕ್ಷಿಯಾಗಿ ಹೋಗಿತ್ತು. ಪುಸ್ತಕ ಓದುವವರು ಇಲ್ಲವಾಗುತ್ತಿದ್ದಾರೆ, ಪುಸ್ತಕದ ಕಾರ್ಯಕ್ರಮಕ್ಕೆ ಬರುವವರು ಇಲ್ಲವಾಗುತ್ತಿದ್ದಾರೆ ಎಂದು ಬೆಂಗಳೂರು ಸದಾ ಹೇಳುತ್ತಿದ್ದ ಎರಡು ಸುಳ್ಳುಗಳನ್ನು ಮಣಿಕಾಂತ್ ಬಟಾಬಯಲು ಮಾಡಿದರು.

ನೀಲಿಮಾ ಪ್ರಕಾಶನ’ದ ಪುಸ್ತಕಗಳು ನೀರಿನಂತೆ ಖರ್ಚಾಯಿತು. ರವೀಂದ್ರ ಕಲಾಕ್ಷೇತ್ರಕ್ಕೆ ಬಂದವರಿಗೆ ಹಾಡು ಹಬ್ಬದ ಜೊತೆಗೆ ಪ್ರಕಾಶ್ ರೈ, ವಿಶ್ವೇಶ್ವರ ಭಟ್, ರವಿ ಬೆಳಗೆರೆ, ಕೃಷ್ಣೇಗೌಡ ಅವರ ಮಾತು ಕೇಳುವ ಅವಕಾಶ. ಎಲ್ಲಕ್ಕಿಂತ ಹೆಚ್ಚಾಗಿ ಅಮ್ಮನನ್ನು ನೆನಪಿಸಿಕೊಳ್ಳಲು ಒಂದು ನೆಪ ಸಿಕ್ಕಿತು.

ಅಲ್ಲಿನ ಒಂದು ನೋಟ ಇಲ್ಲಿದೆ. ಚಿತ್ರಗಳೆಲ್ಲವೂ ನಮ್ಮ ಮಲ್ಲಿ ಆರ್ಥಾತ್ ಡಿ ಜಿ ಮಲ್ಲಿಕಾರ್ಜುನ್ ಅವರದ್ದು.Tuesday, April 28, 2009

ದೇಶ-ಕಾಲ, ಛಂದ ಪುಸ್ತಕ ಹಾಗೂ ಶ್ರೀನಿವಾಸ ವೈದ್ಯರ ಸಾಹಿತ್ಯ

ಶ್ರೀನಿವಾಸ ವೈದ್ಯರ ಸಾಹಿತ್ಯದ ಬಗ್ಗೆ ಮಾತನಾಡಲು ದೇಶ-ಕಾಲ ಮತ್ತು ಛಂದ ಪುಸ್ತಕವು ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿವೆ. ವಸುಧೇಂಧ್ರ ಅವರು ಅಸ್ಥೆಯಿಂದ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ಆಹ್ವಾನ ಪತ್ರಿಕೆ ಇಲ್ಲಿದೆ.

ಸ್ಥಳ: ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನ ಗುಡಿ

ದಿನಾಂಕ: ಶುಕ್ರವಾರ, ಮೇ 1 ನೇ 2009

ಸಮಯ: ಬೆಳಿಗ್ಗೆ 10:30 ಕ್ಕೆ

Sunday, April 26, 2009

ಕ್ಯಾಮ್ ನಿಂದ 5 ಪುಸ್ತಕಗಳು

ಶ್ರೀ ಪಡ್ರೆ, ಪೂರ್ಣಪ್ರಜ್ಞ ಬೇಳೂರು, ಆನಂದ ತೀರ್ಥ ಪ್ಯಾಟಿ, ಶಿವರಾಂ ಪೈಲೂರು ಇವರೆಲ್ಲ ಬರೆದ 5 ಅತ್ಯುಪಯುಕ್ತ ಪುಸ್ತಕಗಳು ಮೇ 2 ರಂದು ಧಾರವಾಡದಲ್ಲಿ ಬಿಡುಗಡೆಯಾಗಲಿವೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆ ಇಲ್ಲಿದೆ. ಹೆಚ್ಚಿನ ಮಾಹಿತಿಗೆ ಶಿವರಾಂ ಪೈಲೂರು: 9448410077 ಇಲ್ಲಿಗೆ ಸಂಪರ್ಕಿಸಬಹುದು.

Sunday, April 19, 2009

ಉದ್ಯಮಿಯ ಕಣ್ಣಲ್ಲಿ ಹೊಳೆಯುವ ಇಂಡಿಯಾ(ಗಮನಕ್ಕೆ: ಇದು ವಿಕಾಸ್ ಹೆಗಡೆ ಅವರ 'ವಿಕಾಸ ವಾದ' ಬ್ಲಾಗ್ ನಿಂದ ಎತ್ತಿಕೊಂಡ ನಂದನ್ ನಿಲಕೇಣಿ ಅವರ ಇಮೇಜಿಂಗ್ ಇಂಡಿಯಾ ಪುಸ್ತಕ ಕುರಿತ ಬರಹ)

ಇದುವರೆಗೂ ರಾಜಕಾರಣಿಗಳು, ವಿಚಾರವಾದಿಗಳು, ಧಾರ್ಮಿಕರು ಭಾರತವನ್ನು, ಭಾರತದ ಭವಿಷ್ಯವನ್ನು ಹಲವಾರು ರೀತಿ ಊಹಿಸಿಕೊಂಡಿರಬಹುದು. ಆದರೆ ಉದ್ಯಮಿಯೊಬ್ಬರ ಊಹೆಯ ಭಾರತ ಹೇಗಿರುತ್ತದೆ ಎಂಬ ಕಲ್ಪನೆ ಹೊಸದು. ಇದೇ ಕುತೂಹಲದಿಂದ ಕೈಗೆತ್ತಿಕೊಂಡಿದ್ದು ದೇಶದ ಪ್ರತಿಷ್ಠಿತ ಕಂಪನಿ ಇನ್ಫೊಸಿಸ್ ನ ಮುಖ್ಯಸ್ಥರಲ್ಲೊಬ್ಬರಾದ ನಂದನ್ ನೀಲೇಕಣಿಯವರಿಂದ ಇತ್ತೀಚೆಗೆ ಬರೆಯಲ್ಪಟ್ಟ ಪುಸ್ತಕ ’ಇಮ್ಯಾಜಿನಿಂಗ್ ಇಂಡಿಯಾ’.

’ಐಡಿಯಾಸ್ ಫಾರ್ ದಿ ನ್ಯೂ ಸೆಂಚುರಿ(ಹೊಸ ಶತಮಾನಕ್ಕೆ ವಿಚಾರಗಳು)’ ಎಂಬ ಅಡಿಬರಹದ ಈ ಪುಸ್ತಕದಲ್ಲಿ ನಂದನ್ ನೀಲೇಕಣಿಯವರು ವಿವಿಧ ಮಾಹಿತಿಗಳೊಂದಿಗೆ ಭಾರತವನ್ನು ಒಂದು ಭರವಸೆಯ ದೇಶವಾಗಿ ವಿಶ್ಲೇಷಿಸುತ್ತಾ ಹೋಗುತ್ತಾರೆ. ಭಾರತವು ಸ್ವಾತಂತ್ರ್ಯಾ ನಂತರ ಬೆಳೆದು ಬಂದ ರೀತಿ, ಭಾರತದ ಸಾಮಾಜಿಕ, ರಾಜಕೀಯ ಬದಲಾವಣೆಗಳು, ಜಗತ್ತು ಗುರುತಿಸುವ ದೇಶವಾಗಿ ಹೊರಹೊಮ್ಮಿದ ರೀತಿಯ ಜೊತೆಗೆ ಒಂದು ಅತ್ಯುತ್ತಮ ಮಾನವ ಸಂಪನ್ಮೂಲವುಳ್ಳ ದೇಶವಾಗಿ ಈ ಶತಮಾನದ ಮುಂದಿನ ವರ್ಷಗಳು ಭಾರತದ್ದೇ ಆಗಿರುತ್ತವೆ ಎಂಬ ವಿಶಿಷ್ಟ ಆಶಾಭಾವನೆಯನ್ನು ಮೂಡಿಸುತ್ತದೆ ಪುಸ್ತಕ. ಬರೀ ಭಾರತದಲ್ಲಿರುವ ಸಮಸ್ಯೆಗಳನ್ನು ಮಾತ್ರ ಗುರುತಿಸಿ ಟೀಕಿಸುವ ಕೆಲಸ ಮಾಡದೇ ಪ್ರತಿಯೊಂದಕ್ಕೂ ಸಕಾರಾತ್ಮಕವಾದ ಉಪಾಯಗಳನ್ನು ಯೋಚಿಸಿರುವುದು, ಆ ನಿಟ್ಟಿನಲ್ಲಿ ವಿಚಾರಗಳನ್ನು ಮಂಡಿಸಿರುವುದು ಈ ಪುಸ್ತಕದ ವಿಶೇಷ. ನೀಲೇಕಣಿಯವರು ಭಾರತದ ಜನಸಂಖ್ಯೆಯನ್ನು ಹೇಗೆ ಲಾಭಕರವಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬಹುದೆಂದು ತಿಳಿಸುತ್ತಾರೆ. ಜನಸಂಖ್ಯಾ ಶಾಸ್ತ್ರದ ಪ್ರಕಾರ ಇನ್ನು ಕೆಲವು ದಶಕಗಳಲ್ಲಿ ವರ್ಷಗಳಲ್ಲಿ ಭಾರತವು ಜಗತ್ತಿನಲ್ಲಿ ಅತಿಹೆಚ್ಚು ಯುವಜನಾಂಗವನ್ನು ಹೊಂದಿದ ದೇಶವಾಗಲಿದ್ದು ಇಡೀ ಜಗತ್ತಿಗೆ ಭಾರತವೆಂಬುದು ಒಂದು ಅನಿವಾರ್ಯ ಎಂಬ ಪರಿಸ್ಥಿತಿಯ ಸೃಷ್ಟಿಯ ಬಗ್ಗೆ ಹೇಳುತ್ತಾರೆ. ಈ ದೇಶದ ಮಕ್ಕಳಿಗೆ, ಯುವಕರಿಗೆ ಮೂಲಭೂತ ಸೌಕರ್ಯಗಳಿಂದ ಹಿಡಿದು, ಉನ್ನತ ವಿದ್ಯಾಭ್ಯಾಸ ಮುಂತಾದ ಸಂಪನ್ಮೂಲಗಳು ಎಟುಕುವಂತೆ ಮಾಡುವುದು ಅಗತ್ಯ ಎಂಬುದನ್ನು ಪುಸ್ತಕದಲ್ಲಿ ಪ್ರತಿಪಾದಿಸುತ್ತಾ ಹೋಗುತ್ತಾರೆ. ಖಂಡಿತ ಇದು ಇನ್ಪೋಸಿಸ್ ಹುಟ್ಟು, ಬೆಳವಣಿಗೆ, ಯಶೋಗಾಥೆಯ ಪುಸ್ತಕವಲ್ಲ.

’ಆಕಸ್ಮಿಕ ಉದ್ಯಮಿಯಿಂದ ಟಿಪ್ಪಣಿಗಳು’ ಎಂಬ ಮುನ್ನುಡಿಯಲ್ಲಿ "ನಿಮಗೆ ಇನ್ಪೋಸಿಸ್ ಒಳಗೆ ಇಷ್ಟು ಚಂದದ ರಸ್ತೆಗಳನ್ನು ಮಾಡಲು ಸಾಧ್ಯವಾದರೆ ಅದು ಹೊರಗೆ ಏಕೆ ಸಾಧ್ಯವಾಗಿಲ್ಲ" ಎಂಬ ವಿದೇಶೀಯನೊಬ್ಬನ ಪ್ರಶ್ನೆಯಿಂದಲೇ ಶುರುಮಾಡುತ್ತಾರೆ. ಇಲ್ಲಿನ ರಾಜಕೀಯ ವ್ಯವಸ್ಥೆಯ ಸಂಕೀರ್ಣತೆಗಳನ್ನು ತಿಳಿಸುತ್ತಾರೆ. ಚುನಾವಣೆಯ ವಿಷಯಕ್ಕೆ ಬಂದಾಗ ಇಲ್ಲಿ ಗೆಲ್ಲುವುದಷ್ಟೆ ಮುಖ್ಯವಾಗುವುದರಿಂದ ಒಬ್ಬ ಉದ್ಯಮಿಯಾಗಿ ರಾಜಕೀಯ ಕ್ಷೇತ್ರದ ಬಗ್ಗೆ ಬಹಳಷ್ಟು ಅರಿವಿದ್ದರೂ ಕೂಡ ತನ್ನಂತವರು ಈ ವ್ಯವಸ್ಥೆಯಲ್ಲಿ ’ಚುನಾಯಿತ’ರಾಗಲು ಅರ್ಹತೆಗಳಿಲ್ಲದಿರುವುದೇ ಕಾರಣ ಎಂಬ ಮಾತುಗಳು ಯೋಚನೆಗೆ ಹಚ್ಚುತ್ತವೆ. ನೆಹರು, ಇಂದಿರಾ ಯುಗ , ಭಾರತದಲ್ಲಿ ಜನಸಂಖ್ಯೆ ನಿಯಂತ್ರಣದ ವಿಫಲತೆ, ಕೈಗಾರಿಕೀಕರಣ, ಮತಬ್ಯಾಂಕ್ ರಾಜಕೀಯ , ಜಾತಿ, ಮೀಸಲಾತಿ ಮುಂತಾದ ರಾಜಕೀಯ, ಇತಿಹಾಸ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಸಂಕ್ಷಿಪ್ತ ವಿವರಣೆಯಿದ್ದು ಇತಿಹಾಸ ಕಾಲದಿಂದ ಈಗಿನವರೆಗೆ ಇಡೀ ಭಾರತದ ಬಗ್ಗೆ ಒಂದು ಸಮಗ್ರ ಚಿತ್ರಣವನ್ನು ಕಟ್ಟಿಕೊಡುತ್ತದೆ.


ಪುಸ್ತಕವು ನಾಲ್ಕು ಭಾಗಗಳನ್ನೊಳಗೊಂಡಿದೆ.

ಮೊದಲನೆಯ ಭಾಗವು ಬದಲಾದ ಭಾರತದ ಪ್ರಸ್ತುತ ಚಿತ್ರಣವನ್ನು ಒಳಗೊಂಡಿದೆ. ಇವತ್ತಿನ ಬದಲಾದ ಪರಿಸ್ಥಿತಿಯಲ್ಲಿ ಉದ್ಯಮಿಯಾಗಲು ಇರುವ ಮುಕ್ತ ಅವಕಾಶಗಳು, ಇಂಗ್ಲಿಷ್ ಭಾಷೆಯ, ಶಿಕ್ಷಣದ ಅಗತ್ಯತೆ, ಭಾರತದ ಮಾರುಕಟ್ಟೆಯನ್ನು ಜಗತ್ತಿಗೆ ತೆರೆದಿಡುವಿಕೆ ಮುಂತಾದ ವಿಷಯಗಳಿವೆ. ಭಾರತದಲ್ಲಿ ಜನ ಈಗ ಏನನ್ನು ಬಯಸುತ್ತಿದ್ದಾರೆ, ಎಷ್ಟೆಲ್ಲಾ ಸಾಂಸ್ಕೃತಿಕ, ಸಾಮಾಜಿಕ ವ್ಯತ್ಯಾಸಗಳ ನಡುವೆಯೂ ಇವತ್ತು ದೇಶದ ಜನರಲ್ಲಿ, ಕೊನೇಪಕ್ಷ ನಗರದ ಮತ್ತು ಮಧ್ಯಮ ವರ್ಗದ ಜನರಲ್ಲಿ ಒಂದು ಅನಿವಾರ್ಯ ಬಹುಮತವಿರುವಂತಹ ವಿಚಾರಗಳಿವೆ.

ಎರಡನೇಯ ಮತ್ತು ಮೂರನೆಯ ಭಾಗಗಳಲ್ಲಿ ಭಾರತದಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗುತ್ತಿವೆ, ಬೆಳವಣಿಗೆಗಳು ಆಗಬೇಕಿದೆ ಎಂಬ ವಿಷಯವಿದೆ. ಸಾಕ್ಷರತೆ, ನಗರೀಕರಣ, ಇನ್ಫ್ರಾಸ್ಟ್ರಕ್ಚರ್, ಸಾರಿಗೆ, ದೂರಸಂಪರ್ಕ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ. ಭಾರತವು ಮಾಹಿತಿ ತಂತ್ರಜ್ಞಾನಕ್ಕೆ ತೆರೆದುಕೊಂಡ ಬಗೆ , ಮಾಹಿತಿ ತಂತ್ರಜ್ಞಾನದ ಉಪಯೋಗ ಪಡೆದುಕೊಂಡ ಕ್ಷೇತ್ರಗಳು, ನಗರಗಳ ಬೆಳವಣಿಗೆಯ ಪ್ರಾಮುಖ್ಯತೆಯೊಂದಿಗೆ ಭಾರತವು ಇನ್ನು ಬರೀ ಹಳ್ಳಿಗಳ ದೇಶವಾಗಿ ಉಳಿದಿಲ್ಲ ಎಂಬ ಅನಿವಾರ್ಯ ಸತ್ಯದ ವಿಷಯಗಳಿವೆ. ಜೊತೆಗೆ ಮೀಸಲಾತಿ, ಎಡಬಲ ಸಿದ್ಧಾಂತಗಳು, ಬಣಗಳು, ವಿಶೇಷ ಆರ್ಥಿಕ ವಲಯದ ಪರ ವಿರೋಧಗಳು, ಕಾರ್ಮಿಕ ಸಂಘಟನೆ, ವಿಶ್ವವಿದ್ಯಾಲಯಗಳಲ್ಲಿನ ರಾಜಕೀಯ ಚಟುವಟಿಕೆಗಳು ಮುಂತಾದ ಭಾವನಾತ್ಮಕ ಸಂಘರ್ಷಗಳನ್ನೊಳಗೊಂಡ ಮತ್ತು ಒಮ್ಮತವಿಲ್ಲದ ವಿಚಾರಗಳು ಚರ್ಚಿಸಲ್ಪಟ್ಟಿವೆ.

ನಾಲ್ಕನೆಯ ಭಾಗವು ಭಾರತದ ಬಹಳಷ್ಟು ಸಮಸ್ಯೆಗಳ ಪರಿಹಾರ, ಸಮರ್ಥ ನಿಭಾಯಿಸುವಿಕೆಯ ಉಪಾಯಗಳೊಂದಿಗೆ ಅಭಿವೃದ್ಧಿಯ ಗುರಿಯು ದೂರದಲ್ಲಿ ಇಲ್ಲ ಎಂಬ ಭಾವನೆಯನ್ನು ತುಂಬುತ್ತದೆ. ಇದು ಬಹುಮುಖ್ಯವಾಗಿ ಮಾಹಿತಿ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಪ್ರಗತಿ ಹೊಂದಬಹುದು ಎಂದು ತಿಳಿಸಿಕೊಡುತ್ತದೆ. ಮಾಹಿತಿ ತಂತ್ರಜ್ಞಾನ ಎಂಬುದು ಬರೀ ವೈಭೋಗಕ್ಕಲ್ಲದೇ ಪ್ರತಿಯೊಂದಕ್ಕೂ ಪರಿಹಾರವಾಗಬಲ್ಲುದು ಎಂಬುದಕ್ಕೆ ಯಶಸ್ವಿ ’ಭೂಮಿ’ ಯೋಜನೆಯ ಉದಾಹರಣೆ ಕೊಡಲಾಗಿದೆ. ಪ್ರತಿಯೊಬ್ಬನಿಗೂ ನಿರ್ದಿಷ್ಟ ಗುರುತಿನ ಸಂಖ್ಯೆಯ (ನ್ಯಾಷನಲ್ ಐ.ಡಿ. ಸಿಸ್ಟಮ್) ಅನುಷ್ಠಾನ ಅತಿ ಅಗತ್ಯವಾಗಿ ಆಗಬೇಕಿದೆ ಎಂದು ತಿಳಿಸಿಕೊಡುತ್ತದೆ. ಇದು ಎಲ್ಲಾ ಯೋಜನೆಗಳೂ ಯಶಸ್ವಿಯಾಗಲು, ಯಾವ ಸಂಪನ್ಮೂಲವೂ ದುರುಪಯೋಗವಾಗದೇ ತಲುಪಬೇಕಾದವರನ್ನು ತಲುಪಲು, ಆರೋಗ್ಯ, ಕಾರ್ಮಿಕನಿಧಿ, ಪಿಂಚಣಿ ಮೊದಲಾದ ಸಾಮಾಜಿಕ ಭದ್ರತೆ ಒದಗಿಸಲು ಸಹಾಯಕಾರಿಯಾಗಬಲ್ಲುದು ಎಂಬುದನ್ನು ವಿವರಿಸಿದ್ದಾರೆ. ಪರಿಸರವನ್ನು ಕಾಯ್ದುಕೊಂದು, ವಿದ್ಯುತ್ ಮುಂತಾದ ಶಕ್ತಿ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಪಡೆದುಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಸೂತ್ರಗಳನ್ನು ಒದಗಿಸಲಾಗಿದೆ. ಎಲ್ಲಾ ಯೋಜನೆಗಳೂ ಪ್ರತಿ ಮೂಲೆಯ ಹಳ್ಳಿಯಲ್ಲಿನ ಪ್ರತಿಯೊಬ್ಬರಿಗೂ ತಲುಪಲು ಒಂದು ಸಮರ್ಥ ಜಾಲದ ಅವಶ್ಯಕತೆ, ದೇಶದ ಮೂಲೆಯಲ್ಲಿನ ಪ್ರತಿಭೆಗಳನ್ನೂ ಕೂಡ ಮುಖ್ಯವಾಹಿನಿಯಲ್ಲಿ ಗುರುತಿಸಿ ಬೆಳೆಸುವ ವಾತಾವರಣ, ಸರಿಯಾದ ಕಾರ್ಯನೀತಿಗಳ ಜಾರಿ ಇನ್ನಿತರ ಕೆಲಸಗಳಿಂದ ಭಾರತದ ಆರ್ಥಿಕತೆಯನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂಬ ಚಿಂತನೆಗಳಿವೆ.

ಇಡೀ ಪುಸ್ತಕವು ನೀಲೇಕಣೀಯವರ ಅಗಾಧ ಅಧ್ಯಯನ ಮತ್ತು ಅನನ್ಯ ಅನುಭವಗಳ ಫಲವಾಗಿ ಕಾಣುತ್ತದೆ. ಭಾರತದ ಕೊಳಕು, ಹುಳುಕುಗಳನ್ನು ಕೂಡ ದೂಷಣೆಯಲ್ಲದ ಧಾಟಿಯಲ್ಲಿ ಹೇಳಿರುವುದರಿಂದ ಓದಲು ಕಿರಿಕಿರಿಯಾಗುವುದಿಲ್ಲ. ಎಲ್ಲಾ ವಿಷಯಗಳನ್ನೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿನ್ನೆಲೆಯಿಂದ ವಿಶ್ಲೇಷಿಸಲಾಗಿದ್ದು ಅದಕ್ಕೆ ಪರಿಹಾರಗಳೂ ಕೂಡ ಅದರಲ್ಲೇ ಇರುವುದನ್ನು ತೋರಿಸಲಾಗಿದೆ. ಒಟ್ಟಿನಲ್ಲಿ ಇಡೀ ಪುಸ್ತಕವು ಭಾರತ ಕೇಂದ್ರೀಕೃತವಾಗಿ ಎಲ್ಲಾ ವಿಷಯಗಳನ್ನೂ ಕೂಡ ಒಳಗೊಂಡಿದ್ದು ಒಂದು ಒಳ್ಳೆಯ ಅಧ್ಯಯನ ಸಾಮಗ್ರಿಯಾಗಬಲ್ಲುದು. ಆದರೆ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಜಾಗತೀಕರಣ ಮುಂತಾದವುಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮತ್ತು ನಗರ ಆಧಾರಿತ ದೃಷ್ಟಿಯಲ್ಲಿ ಯೋಚಿಸಿದ ನಿಟ್ಟಿನಲ್ಲಿ ದೇಶದ ಬಹು ಅಗತ್ಯ ಕೃಷಿ ಕ್ಶೇತ್ರದ ಬೆಳವಣಿಗೆ ಬಗ್ಗೆ ಹೆಚ್ಚು ಒತ್ತು ನೀಡಲಾಗಿಲ್ಲ ಮತ್ತು ಭಾರತದ ಸಾಂಸ್ಕೃತಿಕ ನೆಲೆಗಟ್ಟನ್ನಾಗಲೀ, ಭಾರತೀಯ ಭಾಷೆಗಳ ಉಳಿಕೆ, ಬೆಳವಣಿಗೆಯನ್ನಾಗಲೀ ಗಣನೆಗೆ ತೆಗೆದುಕೊಂಡಿಲ್ಲ ಎಂದು ಅನ್ನಿಸುತ್ತದಾದರೂ ಕೂಡ ಆ ವಿಷಯಗಳು ಈ ಪುಸ್ತಕದ ವ್ಯಾಪ್ತಿಯಿಂದ ಹೊರಗಿನವು ಎಂದುಕೊಳ್ಳಬಹುದು. ಖುದ್ದು ನೀಲೇಕಣೀಯವರೇ ತಮ್ಮ ಪುಸ್ತಕದ ಮೊದಲಿನಲ್ಲಿ ಹೇಳಿಕೊಂಡಂತೆ ೫೦೦ ಚಿಲ್ಲರೆ ಪುಟಗಳ ಈ ಪುಸ್ತಕ ಖಂಡಿತ ಸಿನೆಮಾ, ಕ್ರಿಕೆಟ್ ನಂತಹ ರಂಜನೆಯ ವಿಷಯಗಳನ್ನು ಅಪೇಕ್ಷೇಪಡುವವರಿಗೆ ಅಲ್ಲವಾಗಿದ್ದು ಓದಲು ಅಪಾರವಾದ ಆಸಕ್ತಿ, ತಾಳ್ಮೆ ಬೇಡುತ್ತದೆ.


ಆದರೆ ಈ ರಿಸೆಷನ್ ಸಮಯದಲ್ಲಿ ಜಾಗತಿಕ ಮಾರುಕಟ್ಟೆ, ಸೇವೆಯನ್ನೇ ನಂಬಿಕೊಂಡು ಅಭಿವೃದ್ಧಿ ಹೊಂದಬಹುದೆಂಬ ಭಾವನೆ ಇಟ್ಟುಕೊಂಡು ಇದನ್ನು ಓದಿ ಆಶಾಭಾವನೆ ತಳೆಯಬೇಕೋ ಅಥವಾ ನೀಲೇಕಣಿಯವರಿಗೂ ಇದರ ಅರಿವಿರಲಿಲ್ಲ ಎಂದು ವ್ಯಥೆ ಪಡಬೇಕೋ ಎಂಬ ತೀರ್ಮಾನ ಓದುಗನಿಗೆ ಬಿಟ್ಟದ್ದು.!


(ಮಾರ್ಚ್ ೨೯, ೨೦೦೯ ಕನ್ನಡ(ಸಾಪ್ತಾಹಿಕ) ಪ್ರಭದ ’ಇಂಗ್ಲೀಷ್ ರೀಡರ್’ ಅಂಕಣ ಕ್ಕೆ ಬರೆದದ್ದು. )

Tuesday, April 14, 2009

ಜಲಿಯನ್ ವಾಲಾ ಬಾಗ್ ಬಗ್ಗೆ ಡಾ. ಸ್ವಾಮೀಜಿ ಬರೆದದ್ದು

ಮೊನ್ನೆ ಬಿಡುಗಡೆಯಾದ ನನ್ನ ಹೊಸ ಪುಸ್ತಕ ಜಲಿಯನ್ ವಾಲಾ ಬಾಗ್ ಪುಸ್ತಕವನ್ನು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿಯವರಿಗೆ ತಲುಪಿಸಿ, ಅವರ ಆಶೀರ್ವಾದ ಪಡೆದು ಬಂದಿದ್ದೆ. ಈ ಹಿಂದೆ ನಾನು ಬರೆದ ಪುಸ್ತಕಗಳ್ನೂ ಸಹ ಶ್ರೀಗಳವರಿಗೆ ತಲುಪಿಸಿದ್ದೆ. ಆಗೆಲ್ಲಾ ಪುಸ್ತಕಗಳು ಚನ್ನಾಗಿವೆ ಎಂದು ಆಶೀರ್ವದಿಸಿದ್ದರು. ಚಂದ್ರಯಾನ ಪುಸ್ತಕದ ನೂರು ಪ್ರತಿಗಳನ್ನು ತರಿಸಿಕೊಂಡು ತಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ತಿಗಳಿಗೆ ನೀಡಿದ್ದರು.
ಈಗ ಜಲಿಯನ್ ವಾಲಾ ಬಾಗ್ ಬಗ್ಗೆ ಗುರುಗಳು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕೇವಲ ನನಗೊಬ್ಬನಿಗೆ ಮಾತ್ರವಲ್ಲ, ವಿಜಯ ಕರ್ನಾಟಕ ಪತ್ರಿಕೆಯ ತಮ್ಮ ಬಿಸಿಲು ಬೆಳದಿಂಗಳು ಕಾಲಂನಲ್ಲಿ ಈ ಪುಸ್ತಕದ ಬಗ್ಗೆ ಬರೆಯುವ ಮೂಲಕ ಎಲ್ಲರಿಗೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರು ಬರೆಯುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಈಗ ಬರೆದು ಆಶೀರ್ವದಿಸಿದ್ದಾರೆ. ಗುರುಗಳಿಗೆ ನಮಸ್ಕಾರಗಳು.
ಬಿಸಿಲು ಬೆಳದಿಂಗಳು ಅಂಕಣದಲ್ಲಿ ಗುರುಗಳು ಬರೆದದ್ದು ಇಲ್ಲಿದೆ. ಓದಿ ನಿಮ್ಮ ಅನಿಸಿಕೆ ತಿಳಿಸಿ. ಇದನ್ನು ದೊಡ್ಡದಾಗಿ ನೋಡಲು ಲೇಖನದ ಮೇಲೆ ಕ್ಲಿಕ್ ಮಾಡಿ.

Saturday, April 4, 2009

ಐವರು ಪತ್ರಕರ್ತರ ಪುಸ್ತಕಗಳ ಬಿಡುಗಡೆ

ಬೆಂಗಳೂರು ಪ್ರೆಸ್ ಕ್ಲಬ್ ಪ್ರಕಾಶನ ಹೊರ ತರುತ್ತಿರುವ ಐವರು ಪತ್ರಕರ್ತರ ಪುಸ್ತಕಗಳ ಬಿಡುಗಡೆ ಸಮಾರಂಭ ಇಂದು ಸಂಜೆ ೬ಗಂಟೆಗೆ ನಡೆಯಲಿದೆ.
ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಪುಸ್ತಕ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ, ಗ್ರಂಥಾಲಯ ಇಲಾಖೆ ನಿರ್ದೇಶಕ ಶಿವಾನಂದ ಬಿ.ಹೊಂಡದ ಕೇರಿ ಭಾಗವಹಿಸಲಿದ್ದಾರೆ.
ಬಿಡುಗಡೆಯಾಗಲಿರುವ ಪುಸ್ತಕಗಳು
ಎನ್.ಅರ್ಜುನ್‌ದೇವ - ಸ್ಕೂಪು ತೋಪಾಯಿತು
ಲಕ್ಷ್ಮಣ್ ಕೊಡಸೆ-ಅಜಲು
ಗುಡಿಹಳ್ಳಿ ನಾಗರಾಜ್‌-ರಂಗಸೆಲೆ
ಪಿ.ಪುಟ್ಟಸೋಮಾರಾಧ್ಯ-ಅಕ್ಕ-ಮೀರಾ
ಎಸ್.ಸಿ.ದಿನೇಶ್‌ಕುಮಾರ್‌- ದೇಸಿಮಾತು
ಸಮಾರಂಭದ ಅಂಗವಾಗಿ ಉಡುಪಿ ಜಿಲ್ಲೆಯ ಶ್ರೀ ಮಹಾಗಣಪತಿ ಆರ್ಟ್ ಆಂಡ್ ಕಲ್ಚರಲ್ ಫೌಂಡೇಶನ್ ಯಕ್ಷಗಾನ ಮಂಡಳಿಯ ಕಲಾವಿದ ಗೋಪಾಲಕೃಷ್ಣಭಟ್ ಅವರ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.