Saturday, January 31, 2009

ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ

ಜಿ ಎನ್‌ ಮೋಹನ್‌ರ ‘ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ’ ಪುಸ್ತಕಕ್ಕೆ ಈ ಸಲದ ಪುತಿನ ಕಾವ್ಯಪ್ರಶಸ್ತಿ ಬಂದಿದ್ದು ನಿಮಗೆ ಗೊತ್ತು. ನಿನ್ನೆ(ಬುಧವಾರ) ಸಂಜೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿತ್ತು. ಬೆಂಗಳೂರಿನ ವರ್ಲ್ಡ್‌ಕಲ್ಚರ್‌ ಇನ್ಸಿಟ್ಯೂಟ್‌ನಲ್ಲಿ ಸನ್ಮಾನದ ಜತೆಗೆ ಪುಸ್ತಕದ ಎರಡನೇ ಆವೃತ್ತಿಯ ಬಿಡುಗಡೆಯೂ ಆಯಿತು. ಪದ್ಯದ ಪುಸ್ತಕ ಎರಡನೇ ಆವೃತ್ತಿ ಕಂಡ ಸಡಗರದಲ್ಲಿ ಮುಖಪುಟವನ್ನು ಕೊಂಚ ಹೊಸದಾಗಿಸಲಾಗಿದೆ. ಹೊಸ ಹಳೆಯ ಎರಡೂ ವಿನ್ಯಾಸ ಇಲ್ಲಿವೆ. ನಿಮಗೇನನ್ನಿಸಿತು ಹೇಳಿ. ಅದೇ ಹೊತ್ತಿನಲ್ಲಿ ಮೇಫ್ಲವರ್ ಅಲ್ಲಿ ಬಂದಿದ್ದ ಎಲ್ಲರಿಗೂ ಪುತಿನರ ನೆನಪಿನ ಶುಭಾಶಯಪತ್ರವನ್ನು ಉಚಿತವಾಗಿ ವಿತರಿಸಿತು. ಆ ಚಿತ್ರವೂ ಕೆಳಗಿದೆ.
ಮೋಹನ್‌ಗೆ ಅಭಿನಂದನೆಗಳು.
(ಅಪಾರನಿಂದ ಕಡ ತಂದದ್ದು)


Wednesday, January 28, 2009

ಕಲಾಂರಿಂದ ಚಂದ್ರಯಾನ ಪುಸ್ತಕ ಬಿಡುಗಡೆ


ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಚಂದ್ರಯಾನ ಪುಸ್ತಕವನ್ನು ನವದೆಹಲಿಯಲ್ಲಿ ಜನವರಿ 27 ರಂದು ಬಿಡುಗಡೆ ಮಾಡಿದರು. ದಿ ವೀಕ್ ರೆಸಿಡೆಂಟ್ ಎಡಿಟರ್ ಸಚ್ಚಿದಾನಂದ ಮೂರ್ತಿ ಹಾಗೂ ಶಿವಪ್ರಸಾದ್ ಉಪಸ್ಥಿತರಿದ್ದಾರೆ.ನವದೆಹಲಿ, ಜ. 27: ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸ್ಟಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಇಂದು ಇಲ್ಲಿ ಹೇಳಿದರು.
ಅವರು, ಪತ್ರಕರ್ತ ಶಿವಪ್ರಸಾದ್ ಬರೆದಿರುವ ಚಂದ್ರಯಾನ ಪುಸ್ತಕವನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಕಾನ್ಸ್ಟಾಂಟಿನ್ ಕಿವುಡನಾಗಿದ್ದ. ಆದರೆ ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದ. ತನ್ನ ಅಧ್ಯಯನದಿಂದ ವಿವಿಧ ಸಮೀಕರಣಗಳನ್ನು ರಚಿಸಿದ್ದ. ಆ ಮೂಲಕ ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು ತಿಳಿಸಿದ್ದ. ಇಂದು ಆತನ ಊಹೆ ನಿಜವಾಗಿದೆ. ನಾವು ಚಂದ್ರನ ಮೇಲೆ ಹೊಗಿ ಬಂದಿದ್ದೇವೆ. ಹೀಗಾಗಿ ಚಂದ್ರಯಾನದ ಕಲ್ಪನೆಯ ಜನಕ ಕನ್ಸ್ಟಾಂಟಿನ್ ಎಂದರು.
ಪುಸ್ತಕ ಬಿಡುಗಡೆ ಮಾಡಿದ ನಂತರ ಪ್ರಥಮ ಪ್ರತಿಯನ್ನು ದಿ ವೀಕ್ ನ ಸ್ಥಾನಿಕ ಸಂಪಾದಕರಾದ ಕೆ.ಎಸ್. ಸಚ್ಚಿದಾನಂದ ಮೂರ್ತಿ ಅವರಿಗೆ ನೀಡಿದರು. ನಂತರ ಪುಸ್ತಕದಲ್ಲಿನ ವಿವಿಧ ಅಧ್ಯಾಯಗಳ ಬಗ್ಗೆ ಮಾಹಿತಿ ಪಡೆದರು.
ಚಂದ್ರಯಾನ ಉಡ್ಡಯನದ ನಂತರ ಅಮೇರಿಕಾದ ನಾಸಾ, ಒಬಾಮಾ ನೀಡಿದ್ದ ಪ್ರತಿಕ್ರಿಯೆ ಹಾಗೂ ಆ ಬಗ್ಗೆ ಮಾಧವನ್ ನಾಯರ್ ನೀಡಿದ್ದ ವಿವರಣೆ ಇರುವ ಅಧ್ಯಾಯವನ್ನು ಲೇಖಕ ಶಿವಪ್ರಸಾದ್ ಅವರಿಂದ ಓದಿಸಿ, ವಿವರಣೆ ಪಡೆದರು.
ನಂತರ ಮತ್ತೋರ್ವ ಪತ್ರಕರ್ತ ವಿನಾಯಕ್ ಭಟ್ ಬರೆದಿದ್ದ ದಿ ಗ್ರೇಟ್ ಮೂನ್ ಹೋಕ್ಸ್-1835 ಅಧ್ಯಾಯದ ಬಗ್ಗೆಯೂ ವಿವರಣೆ ಪಡೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿನಾಯಕ್ ಭಟ್ ಅವರಿಗೆ ಅವರ ಲೇಖನದಲ್ಲಿದ್ದ ಫೋಟೋ ತೋರಿಸಿ, ಈ ಬಗ್ಗೆ ವಿವರಣೆ ಕೇಳಿ ಆನಂದಿಸಿದರು.
'ಚಂದ್ರಯಾನ ಪುಸ್ತಕ ಬರೆಯಲು ಒಂದು ವರ್ಷ ತೆಗೆದುಕೊಂಡಿದ್ದೀರಿ. ಐತಿಹಾಸಿಕ ಯೋಜನೆಯಾದ ಚಂದ್ರಯಾನ ಕುರಿತ ಸಮಗ್ರ ವಿವರ ಇರುವ ಪುಸ್ತಕವನ್ನು ಹೊರ ತಂದಿರುವುದು ಉತ್ತಮ ಪ್ರಯತ್ನ' ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ 'ಪ್ರಜಾವಾಣಿ' ವಿಶೇಷ ಪ್ರತಿನಿಧಿ ದಿನೇಶ್ ಅಮಿನ್ ಮಟ್ಟು, 'ಡೆಕ್ಕನ್ ಹೆರಾಲ್ಡ್' ಸ್ಥಾನಿಕ ಸಂಪಾದಕ ಬಿ.ಎಸ್. ಅರುಣ್, 'ವಿಜಯ ಕರ್ನಾಟಕ' ದೆಹಲಿ ಪ್ರತಿನಿಧಿ ವಿನಾಯಕ್ ಭಟ್, ಕರ್ನಾಟಕ ವಾರ್ತಾ ಕೇಂದ್ರದ ಸಹಾಯಕ ನಿರ್ದೆಶಕ ವೀರಣ್ಣ ಕಮ್ಮಾರ, ಸುವರ್ಣ ಚಾನೆಲ್ ವರದಿಗಾರ ಪ್ರಶಾಂತ್ ನಾತೂ ಉಪಸ್ಥಿತರಿದ್ದರು.

Monday, January 26, 2009

ಅಪಾರನ ಮುಖಪುಟಗಳು

ವಿಜಯ ಕರ್ನಾಟಕ ಮಿತ್ರ ರಘು ಅಪಾರ ಕನ್ನಡ ಪುಸ್ತಕ ಲೋಕದಲ್ಲಿ ಮುಖ ಪುಟ ವಿನ್ಯಾಸಕ್ಕೆ ಹೊಸ ಗತ್ತು ಗಮ್ಮತ್ತು ತಂದುಕೊಟ್ಟವರು. ಅವರ ಬ್ಲಾಗ್ http://raghuapara.blogspot.com/ಹೊಕ್ಕರೆ ಮುಖಪುಟ ವಿನ್ಯಾಸದ ಆಯಾಮಗಳು ತಿಳಿಯುತ್ತವೆ.
ಇಲ್ಲಿ ಅವರ ಬ್ಲಾಗ್ ನಲ್ಲಿರುವ ಮೂರು ಮುಖಪುಟಗಳ ವಿನ್ಯಾಸಗಳಿವೆ.


Thursday, January 22, 2009

ಕನ್ನಡ ಬುಕ್!

ಸ್ನೇಹಿತರೆ,
ಪುಸ್ತಕಗಳಿಗಾಗಿ ಒಂದು ಬ್ಲಾಗ್ ಆರಂಭಿಸಬೇಕು ಎಂಬ ಆಸೆಯಿತ್ತು. ಆಗಿರಲಿಲ್ಲ.
ಈಗ ಚಿತ್ರದುರ್ಗದಲ್ಲಿ ನಡೆಯುತ್ತಿರುವ 75 ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪುಸ್ತಕಗಳಿಗಾಗಿ ಈ ಬ್ಲಾಗ್ ಆರಂಭಿಸಲಾಗಿದೆ. ಕನ್ನಡ, ಇಂಗ್ಲೀಷ್ ಸೇರಿದಂತೆ ಯಾವುದೇ ಭಾಷೆಯ ಪುಸ್ತಕಗಳ ವಿವರ ಇಲ್ಲಿ ನೀಡಬಹುದು. ಕನ್ನಡಕ್ಕೆ ಆದ್ಯತೆ.

ನಿಮ್ಮ ಗಮನಕ್ಕಾಗಿ ಕೆಲ ಅಂಶಗಳು:
1. ಈ ಬ್ಲಾಗ್ ನಿಮ್ಮದು. ನೀವೇ ಇದನ್ನು ಮುನ್ನಡೆಸಿಕೊಂಡು ಹೋಗಬೇಕು.
2. ಯಾವುದೇ ಹೊಸ ಪುಸ್ತಕದ ಪರಿಚಯ ಇಲ್ಲಿ ಮಾಡಿಕೊಡಬಹುದು. ಮರೆತುಹೋದ, ಅಪರೂಪದ ಪುಸ್ತಕಗಳನ್ನೂ ಸಹ ಪರಿಚಯಿಸಬಹುದು.
3. ಪುಸ್ತಕದ ವಿಮರ್ಶೆ ಅಥವಾ ಪರಿಚಯ ವಸ್ತುನಿಷ್ಠವಾಗಿರಲಿ.
4. ಶಬ್ಧಗಳಿಗೆ ಮಿತಿ ಇಲ್ಲ. ಆದರೆ 200-300 ಶಬ್ಧಗಳ ಒಳಗೆ ಕೃತಿ ಪರಿಚಯ ಅಥವಾ ವಿಮರ್ಶೆ ಇದ್ದರೆ ಚಂದ.
5. ವ್ಯಕ್ತಿಗತ ಟೀಕೆಗಳು ಬೇಡ. ಆದಷ್ಟು ಪುಸ್ತಕದ ಪಾಸಿಟಿವ್ ಅಂಶಗಳನ್ನು ಮಾತ್ರ ಹೇಳಿ.
6. ಅಲ್ಲಿ ತಪ್ಪಾಗಿದೆ, ಇಲ್ಲಿ ಹೀಗಾಗಿದೆ, ಹೀಗೆ ಮಾಡಿದ್ದರೆ ಇನ್ನೂ ಪುಸ್ತಕ ಚನ್ನಾಗಿರುತ್ತಿತ್ತು ಎಂಬ ಫ್ರೀ ಸಲಹೆಗಳು ಬೇಡ.
7. ತೀರಾ ಸಿಲ್ಲಿ, ಸಿಲ್ಲಿ ಪುಸ್ತಕಗಳ ಪರಿಚಯ ಕಳುಹಿಸಬೇಡಿ.
8. ವಸ್ತುನಿಷ್ಠವಾಗಿರುವ, ಸಮಕಾಲೀನ ವಿಚಾರದ ಪುಸ್ತಕಗಳ ಬಗ್ಗೆ ಬರೆದರೆ ಉತ್ತಮ.
9. ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ಸ್ಕ್ಯಾನ್ ಮಾಡಿ ಕಳುಹಿಸಬಹುದು.
10. ಆದರೆ ಆ ರೀತಿ ಸ್ಕ್ಯಾನ್ ಮಾಡಿದ ಪುಟಗಳು ಜೆಪಿಇಜಿ ಫಾರ್ಮ್ಯಾಟ್ ಹಾಗೂ ಉತ್ತಮ ರೆಸಲ್ಯೂಷನ್ ಇರಲಿ.
11. ನೀವೇ ಟೈಪ್ ಮಾಡಿದ್ದರೆ ನುಡಿಯಲ್ಲಿ ಟೈಪ್ ಮಾಡಿ ಕಳುಹಿಸಿ.
12. ಪುಸ್ತಕ ಪರಿಚಯ-ವಿಮರ್ಶೆ ಜೊತೆಗೆ ಪುಸ್ತಕದ ಲೇಖಕರು, ಫೋಟೋ, ವಿಳಾಸ, ದೂರವಾಣಿ, ಇ-ಮೇಲ್ ಇರಲಿ.
13. ಪುಸ್ತಕದ ಮುಖಪುಟ, ಬೆಲೆ, ಪುಟಗಳ ಸಂಖ್ಯೆಯಂತಹ ವಿವರಗಳನ್ನು ಮರೆಯದೇ ಕಳುಹಿಸಿ.
14. ಪುಸ್ತಕ ಬಿಡುಗಡೆ ಸಮಾರಂಭದ ಆಹ್ವಾನ ಪತ್ರಿಕೆಗಳನ್ನೂ ಕಳುಹಿಸಬಹುದು.
15. ಇದರಲ್ಲಿ ಕೆಲವು ಪ್ರಕಾಶಕರ ಬ್ಲಾಗ್ ಹಾಗೂ ವೆಬ್ ಸೈಟ್ ವಿವರ ನೀಡಲಾಗಿದೆ. ನಿಮಗೆ ತಿಳಿದ ಇತರೆ ಪ್ರಕಾಶಕರ ವಿವರಗಳನ್ನು ಕಳುಹಿಸಿ.

ಬರಹಗಳನ್ನು shivaprasadtr@gmail.com ಈ ಇ-ಮೇಲ್ ಗೆ ಕಳುಹಿಸಿ.
ಸಾಹಿತ್ಯಾಸಕ್ತರಿಗೆ, ನಿಮ್ಮ ಸ್ನೇಹಿತರಿಗೆ ತಾವು ಓದಿದ ಪುಸ್ತಕಗಳ ಬಗ್ಗೆ ಎಲ್ಲರೊಂದಿಗೆ ಹಂಚಿಕೊಳ್ಳಲು ಹೇಳಿ, ಬ್ಲಾಗ್ ವಿವರ ನೀಡಿ.
ನಿಮ್ಮ ಓದುವ, ಹಾಗೂ ಇತರರಿಗೆ ಓದಿಸುವ ಆಸಕ್ತಿ ನಿರಂತರವಾಗಿರಲಿ.

ನವಕರ್ನಾಟಕ ಪುಸ್ತಕಗಳು