Tuesday, February 24, 2009

ಸದ್ಭಾವಕವಿ ಚೆನ್ನವೀರ ಕಣವಿಯವರ ಮುನ್ನುಡಿ, ಬೆನ್ನುಡಿಗಳನ್ನು ಹಾಗೂ ಕೆಲವು ಹಿರಿಯರು, ಕಿರಿಯರ ಕುರಿತಾದ ಸಾಂದರ್ಭಿಕವಾಗಿ ಬರೆದ ಲೇಖನಗಳನ್ನು ಒಳಗೊಂಡ ಸಂಗ್ರಹ ಇದು. ಈ ಮೊದಲು ಅವರ ಮುನ್ನುಡಿಗಳದೇ ಒಂದು ಸಂಗ್ರಹ `ಶುಭ ನುಡಿಯೆ ಹಕ್ಕಿ‘ ಪ್ರಕಟವಾಗಿತ್ತು.
ಸ.ಸ.ಮಾಳವಾಡ, ಬೆಟಗೇರಿ ಕೃಷ್ಣಶರ್ಮ, ಬಸವರಾಜ ಸಾದರ ಮುಂತಾದ ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅಷ್ಟೇನೂ ಪ್ರಸಿದ್ಧರಲ್ಲದ ಲೇಖಕರಿಗೂ ಬೆನ್ನುತಟ್ಟಿ ಅವರು ಮುನ್ನುಡಿಗಳನ್ನು ಬರೆದಿರುವುದನ್ನು ನೋಡಬಹುದು.
ಇಲ್ಲಿ ಕುತೂಹಲಕಾರಿಯಾಗಿರುವುದು ಶೆ.ಗೋ.ಕುಲಕರ್ಣಿಯವರ `ನಾ ಕಂಡ ಗೆಳೆಯರ ಗುಂಪು‘ ಪುಸ್ತಕಕ್ಕೆ ಬರೆದ ಬೆನ್ನುಡಿ. ಈ ಪುಸ್ತಕ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ಮೂರೂ ಸಂಪುಟಗಳಿಗೆ ಅವರು ಪ್ರತ್ಯೇಕ ಬೆನ್ನುಡಿಗಳನ್ನು ಬರೆದಿದ್ದಾರೆ. ತರುಣ ಬರಹಗಾರರಿಗೆ ಹಾರೈಕೆ, ಅಭಿನಂದನೆಗಳನ್ನು ಕಣವಿಯವರು ಮಾಡಿದ್ದಾರೆ. ಕೆಲವು ಹಿರಿಯ ಲೇಖಕರ ಕೃತಿಗಳಿಗೆ ಬರೆದ ಬೆನ್ನುಡಿ, ಮುನ್ನುಡಿಗಳನ್ನು ಹೊರತುಪಡಿಸಿದರೆ ಒಂದು ಕಾಲಘಟ್ಟದ ಸಾಹಿತ್ಯ ಸಂದರ್ಭವನ್ನು ಅರಿಯಲು ಈ ಪುಸ್ತಕ ಸಹಕಾರಿಯಾಗುವಂತಿದೆ.
`ವ್ಯಕ್ತಿ ಶಕ್ತಿ : ನನಗೆ ಕಂಡಷ್ಟು : ಭಾಗದಲ್ಲಿ ಜಿ. ನಾರಾಯಣ, ಚದುರಂಗ, ಗೊರೂರು ಮುಂತಾದವರ ವ್ಯಕ್ತಿತ್ವವನ್ನು ರೇಖಿಸಿದ್ದಾರೆ. ಸಂಕೀರ್ಣ ಭಾಗದಲ್ಲಿ ಮಧುರ ಚೆನ್ನರ ಕಾವ್ಯದ ಬಗ್ಗೆ, `ಜಾನಪದ ದೀಪಾರಾಧನೆ ಸಮಾರಂಭ‘ ಮುಂತಾದ ವಿಶೇಷ ಸಂಗತಿಗಳ ಬಗ್ಗೆ ಬರೆದಿದ್ದಾರೆ. ಇಲ್ಲಿ ಅವರ ಒಂದು ಅನುವಾದವೂ ಇದೆ. ಚೀನಾದ ತತ್ವಜ್ಞಾನಿ ಲಿನ್ ಯು ಟಾಂಗ್ ನ `ದಿ ಇಂಪಾರ್ಟನ್ಸ್ ಆಫ್ ಲಿವಿಂಗ್‘ ಎಂಬ ಪುಸ್ತಕದ ಕೆಲವು ಅಧ್ಯಾಯಗಳನ್ನು ಅನುವಾದ ಮಾಡಿದ್ದಾರೆ. ಈ ಅನುವಾದ ಸುಂದರವಾಗಿದೆ. ಇಲ್ಲಿ ಕಣವಿಯವರು ಬರೆದಿರುವ ಬಹುಪಾಲು ಲೇಖಕರು ಉತ್ತರ ಕರ್ನಾಟಕದವರು ಎನ್ನುವುದು ಕುತೂಹಲಕಾರ.
ಕಣವಿಯವರ ಶೈಲಿ ತಿಳಿನೀರಿನಂತೆ ಪಾರದರ್ಶಕವಾಗಿರುವಂಥದ್ದು. ಅದು ಅವರ ಎಂದಿನ `ಸದ್ಭಾವ‘ದಿಂದ ಇನ್ನಷ್ಟು ಕಳೆಗಟ್ಟಿದೆ.

ಶೀರ್ಷಿಕೆ: ಸದ್ಭಾವ ಲೇಖಕರು: ಚೆನ್ನವೀರ ಕಣವಿ ಪ್ರಕಾಶಕರು: ಸಂವಹನ ಪುಟಗಳು: 216 ಬೆಲೆ:ರೂ.150/-

ಕೃಪೆ : ಪ್ರಜಾವಾಣಿ

Saturday, February 7, 2009

ರವಿ ಬೆಳಗೆರೆ ‘ನೀನಾ ಪಾಕಿಸ್ತಾನ’ದಲ್ಲಿ ಜೆಹಾದ್‌ನ ನಾನಾ ಮುಖಗಳು…

ಗಮನಕ್ಕೆ: ಈ ಬರಹವನ್ನು ವಿಜಯ್ ಅವರ ಮನಸ್ಸಿನ ಮರ್ಮರ ಬ್ಲಾಗ್ ನಿಂದ ಎತ್ತಿಕೊಳ್ಳಲಾಗಿದೆ. ಅವರ ಬ್ಲಾಗ್ ಗೆ ಭೇಟಿ ಕೊಡಲು 'ಮನಸ್ಸಿನ ಮರ್ಮರ' ಇಲ್ಲಿ ಕ್ಲಿಕ್ ಮಾಡಿ
* * *ಇದೊಂದು ಪುಸ್ತಕದ ಬಗ್ಗೆ ಹೇಳಿಕೊಂಡಷ್ಟು ರವಿ ಬೆಳಗೆರೆ ಇನ್ಯಾವ ಪುಸ್ತಕದ ಕುರಿತೂ ಹೇಳಿರಲಿಕ್ಕಿಲ್ಲ. ಈಗ ಕೊಡ್ತೀನಿ… ಆಮೇಲೆ ಕೊಡ್ತೀನಿ ಅಂತ ಸುಮಾರು ಆರೇಳು ವರ್ಷಗಳಲ್ಲಿ ಓದುಗರಲ್ಲಿ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದರು. ಕೊನೆಗೂ ಮೊನ್ನೆ ಗಣರಾಜ್ಯೋತ್ಸವದ ಮುನ್ನಾದಿನ ಗಜಗರ್ಭ ಪ್ರಸವವಾಯ್ತು. ಕಾದು ಕಾದು ಬೇಸರಗೊಂಡಿದ್ದ ಓದುಗ ದೊರೆಗಳ ಮುಖ ಪ್ರಸನ್ನವಾಯ್ತು. ಹಿಂದೊಮ್ಮೆ ತಮ್ಮ ಪತ್ರಿಕೆ ‘ಹಾಯ್ ಬೆಂಗಳೂರ್‘ನಲ್ಲಿ ‘ನೀನಾ ಪಾಕಿಸ್ತಾನ‘ ಮಾಲಿಕೆಯನ್ನು ಬೆಳಗೆರೆ ಶುರು ಮಾಡಿದ್ದರು. ಭುಟ್ಟೋ ಮರಣದಂಡನೆಯ ವಿವರಗಳೊಂದಿಗೆ ಪ್ರಾರಂಭವಾದ ಆ ಮಾಲಿಕೆ ಶುರುವಾದ ಕೆಲವೇ ದಿನಗಳಲ್ಲಿ ನಿಂತೂ ಹೋಗಿತ್ತು… ಓದುಗರ ನಿರೀಕ್ಷೆಯ ಕಾವಿಗೆ ಇನ್ನಷ್ಟು ತುಪ್ಪವನ್ನು ಸುರಿದು. ಇದೀಗ ಅಂತೂ ಇಂತೂ ಪುಸ್ತಕ ಹೊರಬಂದಿದೆ. ಪಾಕಿಸ್ತಾನದ ಪತ್ರಕರ್ತ ಅಮೀರ್ ಮೀರ್ ಕೃತಿಯನ್ನಾಧರಿಸಿದ ಈ ಪುಸ್ತಕ ಜೆಹಾದಿ ಜಗತ್ತಿನ ಒಳಹೊರಗುಗಳನ್ನು, ಧರ್ಮಾಂಧತೆಯ ಕರಾಳ ಮುಖಗಳನ್ನು ಅನಾವರಣಗೊಳಿಸಿದೆ.
ಇಪ್ಪತ್ತೊಂಬತ್ತು ಅಧ್ಯಾಯಗಳಲ್ಲಿ ಸವಿಸ್ತಾರವಾಗಿ ಜೆಹಾದಿಗಳ ಪ್ರಪಂಚದ ಮೂಲೆಮೂಲೆಯತ್ತ ಬೆಳಕು ಚೆಲ್ಲುವ ಈ ಕೃತಿಯ ಆರಂಭದಲ್ಲಿ ಬೆಳಗೆರೆ ಸವಿಸ್ತಾರವಾದ ಮುನ್ನುಡಿಯೊಂದರ ಮೂಲಕ ಧರ್ಮಯುದ್ಧದ ಅಂಗಳಕ್ಕೆ ಓದುಗರನ್ನು ಎಳೆತಂದು ನಿಲ್ಲಿಸುತ್ತಾರೆ. ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್‌ಗೆ ಸಮರ್ಪಿತವಾದ ಈ ಪುಸ್ತಕದ ಪ್ರತಿಯೊಂದು ಅಧ್ಯಾಯವೂ ಜೆಹಾದಿಗಳ ಕಪಿಮುಷ್ಟಿಯಲ್ಲಿರುವ ಪಾಕಿಸ್ತಾನದ ಚಿತ್ರಣವನ್ನು ಒಂದೊಂದಾಗಿ ಕಟ್ಟಿಕೊಡುತ್ತಾ ಹೋಗುತ್ತದೆ. ಐ.ಎಸ್.ಐ., ಅಲ್-ಕೈದಾ, ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೊಯಿಬಾ, ಹರ್ಕತುಲ್ ಮುಜಾಹಿದೀನ್, ಹಿಜ್ಬುಲ್ ಮುಜಾಹಿದೀನ್ ಹೀಗೆ ಬೇರೆಬೇರೆ ಹೆಸರಿನಲ್ಲಿ ಧರ್ಮಯುದ್ಧದ ನೆಪದಲ್ಲಿ ರಕ್ತದ ಕೋಡಿ ಹರಿಸುತ್ತಿರುವ ಸಂಘಟನೆಗಳ ಬಗ್ಗೆ ಇಂಚಿಂಚೂ ಬಿಡದೇ ಸಂಗ್ರಹಿಸಿ ಕೊಟ್ಟಿರುವ ಮಾಹಿತಿಯನ್ನು ಓದಿದಾಗ ಇದನ್ನು ಬರೆದು ದಕ್ಕಿಸಿಕೊಂಡಿರುವ ಪಾಕಿಸ್ತಾನಿ ಪತ್ರಕರ್ತನ ಯಮಗುಂಡಿಗೆಯ ಬಗ್ಗೆ ಮೆಚ್ಚುಗೆ ಬೆರೆತ ಆಶ್ಚರ್ಯ ಮೂಡದೇ ಇರದು. ಹಾಗೆಯೇ ಅದನ್ನು ಸಮರ್ಥವಾಗಿ ಕನ್ನಡಕ್ಕೆ ತಂದ ಬೆಳಗೆರೆಯ ಬರವಣಿಗೆಯ ಚಾತುರ್ಯ, ಶೈಲಿ ಕೂಡಾ ಇಷ್ಟವಾಗುತ್ತದೆ. ನೂರಾರು ಅಪರೂಪದ ಫೋಟೋಗಳು ಪುಟಪುಟಗಳ ಒಟ್ಟಂದಕ್ಕೆ ಇನ್ನಷ್ಟು ಕಳೆಕಟ್ಟುವಂತೆ ಮಾಡಿರುವುದು ಮಾತ್ರವಲ್ಲದೆ, ಅಲ್ಲಿನ ವಿವರಣೆಗೆ ಇನ್ನಷ್ಟು ಇಂಬು ಕೊಡುವಂತಿವೆ.
ಪಾಕಿಸ್ತಾನದ ಮುಸ್ಲಿಂ ಪಂಗಡಗಳ ಒಳಜಗಳಗಳು, ಐ.ಎಸ್.ಐ. ಮತ್ತು ಜೆಹಾದಿಗಳ ಬಿಗಿ ಹಿಡಿತದಲ್ಲಿರುವ ಪಾಕಿ ಸೈನ್ಯ, ಜೆಹಾದಿಗಳ ಹುಟ್ಟಿಗೆ ಅಮೇರಿಕ ಪರೋಕ್ಷವಾಗಿ ಹೇಗೆ ಕಾರಣವಾಯ್ತು, ಅಮೇರಿಕಾದ ಟ್ವಿನ್ ಟವರ್ ದಾಳಿಯ ನಂತರ ಅಮೇರಿಕಾದ ತಾಳಕ್ಕೆ ಅನಿವಾರ್ಯವಾಗಿ ಕುಣಿದ ಮುಷರಫ್ ಜೆಹಾದಿಗಳ ಪ್ರತಿರೋಧಕ್ಕೆ ಸಿಲುಕಿ ಅನುಭವಿಸಿದ ಪ್ರಾಣಭೀತಿ, ಕಂದಹಾರ್ ವಿಮಾನಾಪಹರಣ, ಡೇನಿಯಲ್ ಪರ್ಲ್ ಹತ್ಯೆ… ಹೀಗೆ ಜೆಹಾದಿಗಳ ಲೋಕದೊಳಗೆ ಒಂದು ಸುತ್ತು ತಿರುಗಿದಂತಹ ಅನುಭವವನ್ನು ಪುಸ್ತಕ ನೀಡುವುದಂತೂ ಖಂಡಿತ. ಹೀಗೆ ನಮ್ಮರಿವಿಗೆ ಬರದಂತೆ ಆ ಜಗತ್ತಿನಲ್ಲಿ ನಡೆಯುವ ಘಟನಾವಳಿಗಳು, ಆ ಘಟನೆಗಳಿಗೆ ಪ್ರತ್ಯಕ್ಷ-ಪರೋಕ್ಷ ಕಾರಣಗಳು, ಅದರ ಪರಿಣಾಮ ಇವೆಲ್ಲವನ್ನು ಕಣ್ಣಮುಂದೆಯೇ ನಡೆವಂತೆ ಚಿತ್ರಿಸಿದ ಪರಿ ನಿಜಕ್ಕೂ ಶ್ಲಾಘನೀಯ. ಪಾಕಿಸ್ತಾನದ ಮದರಸಾಗಳು ಹೇಗೆ ಜೆಹಾದಿಗಳ ಹುಟ್ಟಿಗೆ ಕಾರಣವಾಗುತ್ತವೆ, ಅಲ್ಲಿ ಎಳೆ ಕಂದಮ್ಮಗಳ ನಿಷ್ಕಲ್ಮಷ ಮನಸ್ಸಿನಲ್ಲಿ ಹೇಗೆ ಧರ್ಮದ್ವೇಷದ ವಿಷಬೀಜವನ್ನು ಬಿತ್ತಲಾಗುತ್ತದೆ, ಮುಂದೆ ಅವರನ್ನು ಹೇಗೆ ಜೀವಂತ ಬಾಂಬ್ ಆಗಿ ತರಬೇತುಗೊಳಿಸಿ ನಮ್ಮ ದೇಶದೊಳಕ್ಕೆ ಬಿಡಲಾಗುತ್ತದೆ ಅನ್ನುವ ವಿವರಗಳು ಬೆಚ್ಚಿಬೀಳಿಸುವಂತಿವೆ. ಒಸಾಮ, ದಾವೂದ್, ಮುಲ್ಲಾ ಉಮರ್ ಮೊದಲಾದವರು ಜೆಹಾದಿ ಜಗತ್ತಿನ ಮುಖಂಡರ ಜೊತೆ ಕೈಜೋಡಿಸಿ ಹೇಗೆ ಧರ್ಮದ್ವೇಷದ ಬೆಂಕಿಯಿಂದ ಜಗತ್ತಿನಾದ್ಯಂತ ಭಯೋತ್ಪಾದನೆಯ ಬಿಸಿ ಮುಟ್ಟಿಸುತ್ತಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಬೇಕಿದ್ದರೆ ನೀನಾ ಪಾಕಿಸ್ತಾನವನ್ನು ಒಮ್ಮೆ ತಪ್ಪದೇ ಓದಿ.
ತನ್ನ ವಿರೋಧಿಗಳನ್ನು ಹಣಿಯಲು ತಾನೇ ವಿಷದ ಹಾಲೂಡಿ ಬೆಳೆಸಿದ ಜೆಹಾದಿಗಳು, ಅಮೇರಿಕವನ್ನೇ ಕಚ್ಚಲು ಮುಂದಾದ ಬಳಿಕವಷ್ಟೇ ಅದು ಹೇಗೆ ಸುಭಗನಂತೆ ಪೋಸು ಕೊಡುತ್ತಾ ಭಯೋತ್ಪಾದನೆ ನಿರ್ಮೂಲನದ ಮಾತಾಡುತ್ತಿದೆಯೋ ನೋಡಿ. ಈಗ ಅವರು ಏನೇ ಬೊಬ್ಬೆ ಹೊಡೆದರೂ, ಪ್ರಾರಂಭದಲ್ಲಿ ರಷ್ಯನ್ನರನ್ನು ಹಣಿಯುವುದಷ್ಟೇ ಪರಮೋದ್ಧೇಶವನ್ನಾಗಿಸಿಕೊಂಡು ಭಯೋತ್ಪಾದನೆಗೆ ತೆರೆಮರೆಯಲ್ಲಿ ಬೆಂಬಲ ನೀಡಿದ್ದು, ಆ ಮೂಲಕ ಸಣ್ಣ ಪ್ರಮಾಣದಲ್ಲಿ ಸಕ್ರಿಯರಾಗಿದ್ದ ಜೆಹಾದಿಗಳು ಈ ಪ್ರಮಾಣದಲ್ಲಿ ಬೆಳೆದು ನಿಲ್ಲುವಲ್ಲಿ ಅಮೇರಿಕ ನಿರ್ವಹಿಸಿದ ಪಾತ್ರ - ಸುಸ್ಪಷ್ಟವಾಗಿ ಗೋಚರವಾಗುತ್ತದೆ. ಈಗ ಜೆಹಾದಿಗಳು ಯಾವ ಪರಿ ಬೆಳೆದು ನಿಂತಿದ್ದಾರೆಂದರೆ ಅಮೇರಿಕದ ಮಾತು ಹಾಗಿರಲಿ ಪಾಕಿಸ್ತಾನ ಸರ್ಕಾರದ ಮಾತನ್ನೇ ಅವರು ಕೇಳುವುದಿಲ್ಲ. ಜೆಹಾದಿಗಳು ಈ ಪರಿ ಹೆಚ್ಚಿಕೊಂಡಿರುವುದಕ್ಕೆ ಅಮೇರಿಕಾ ಅವರನ್ನು ಆ ಪರಿ ಹಚ್ಚಿಕೊಂಡಿದ್ದು ಹೇಗೆ ಕಾರಣವಾಯ್ತು ಅನ್ನುವುದರ ಬಗ್ಗೆ ಭರಪೂರ ಮಾಹಿತಿ ಪುಸ್ತಕದುದ್ದಕ್ಕೂ ಸಿಗುತ್ತದೆ. ಪುಸ್ತಕದಲ್ಲಿರುವ ವಿವರಣೆ, ಅದು ಕಟ್ಟಿಕೊಡುವ ಅಪರೂಪದ ಮಾಹಿತಿಗಳ ಅಗಾಧತೆ, ಅಪರೂಪದ ಫೋಟೋಗಳು ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಇದೊಂದು ಸಂಗ್ರಹಯೋಗ್ಯ ಪುಸ್ತಕವೆನ್ನುವುದರಲ್ಲಿ ಎರಡು ಮಾತಿಲ್ಲ.
ಆದರೂ ನನ್ನ ಮಟ್ಟಿಗೆ ಹೇಳುವುದಾದರೆ ಈ ಪುಸ್ತಕದಿಂದ ನಾನು ನಿರೀಕ್ಷಿಸಿದ್ದು ನನಗೆ ಸಂಪೂರ್ಣವಾಗಿ ಸಿಗಲಿಲ್ಲವೆಂದೇ ಹೇಳಬೇಕು. ‘ಹಾಯ್‘ನಲ್ಲಿ ಬಂದ ಕೆಲವು ಅಧ್ಯಾಯಗಳನ್ನು ಓದಿದ ನಂತರ ಈ ಪುಸ್ತಕದ ಬಗ್ಗೆ ನನ್ನ ನಿರೀಕ್ಷೆಗಳು ಬೇರೆಯೇ ಇದ್ದವು. ದೇಶ ವಿಭಜನೆಯ ಬಳಿಕ ಪಾಕಿಸ್ತಾನವೆಂಬ ನಮ್ಮ ನೆರೆಯ ರಾಷ್ಟ್ರದಲ್ಲಾದ ಸಮಗ್ರ ಘಟನಾವಳಿಗಳು, ಭಾರತ ಪಾಕಿಸ್ತಾನ ಯುದ್ಧಗಳ ಇತಿಹಾಸ, ಸೈನ್ಯಾಧಿಕಾರಿಗಳ ಸರ್ವಾಧಿಕಾರದಲ್ಲಿ ಆಳಿಸಿಕೊಂಡ ಪಾಕಿಸ್ತಾನ, ಭಾರತದ ಕುರಿತು ಅಲ್ಲಿನ ಜನಸಾಮಾನ್ಯರಲ್ಲಿ ಇರುವ ನೈಜ ಅಭಿಪ್ರಾಯ, ಆರ್ಥಿಕ ಸಂಕಷ್ಟಗಳ ಅಡಿಯಲ್ಲೂ ಅಡಗದ ಅವರ ರಣೋತ್ಸಾಹ… ಹೀಗೆ ಪಾಕಿಸ್ತಾನದ ಸಮಗ್ರ ಚಿತ್ರಣವೊಂದನ್ನು ನಾನು ನಿರೀಕ್ಷಿಸಿದ್ದೆ. ಬಹುತೇಕ ಜೆಹಾದಿಗಳ ಜಗತ್ತಿನ ಸುತ್ತಲೇ ಸುತ್ತುವ ಪುಸ್ತಕದ ವಿವರಣೆಗಳು ಆ ಜಗತ್ತಿನ ಕರಾಳತೆ, ನಿಗೂಢತೆಯನ್ನು ಸಮಗ್ರವಾಗಿ ಪರಿಚಯಿಸುತ್ತದಾದರೂ ಪುಸ್ತಕದಲ್ಲಿನ ಘಟನೆಗಳು ಪಾಕಿಸ್ತಾನದ ಇತ್ತೀಚಿನ ಇತಿಹಾಸದ ಸುತ್ತಲಷ್ಟೇ ಗಿರಕಿ ಹೊಡೆಯುತ್ತವೆ. ಹಾಗಾಗಿ ಸಮಗ್ರ ಇತಿಹಾಸದ ಚಿತ್ರಣದ ನಿರೀಕ್ಷೆಯಿಟ್ಟುಕೊಂಡ ನನಗೆ ಸ್ವಲ್ಪ ಮಟ್ಟಿಗೆ ನಿರಾಸೆಯಾಗಿದ್ದು ಸುಳ್ಳಲ್ಲ. ಬಹುಶಃ ಅಮಿರ್ ಮೀರ್ ಕೃತಿಯ ವ್ಯಾಪ್ತಿಗಷ್ಟೇ ಪುಸ್ತಕ ಸೀಮಿತಗೊಳ್ಳಬೇಕಾದ ಅನುವಾದಕರ ಅಸಹಾಯಕತೆಯೂ ಇದಕ್ಕೆ ಕಾರಣವಿರಬಹುದು. ಏನೇ ಇರಲಿ, ಪ್ರಸ್ತುತ ಪುಸ್ತಕ ಹೊರತರುತ್ತಿರುವ ಬೆಳಗೆರೆಯ ವೇಗವನ್ನು ಗಮನಿಸಿದರೆ, ಅಂತಹ ಪುಸ್ತಕವೊಂದು ಸಧ್ಯದಲ್ಲೇ ನಮ್ಮ ಕೈ ಸೇರಿದರೂ ಆಶ್ಚರ್ಯಪಡಬೇಕಾಗಿಲ್ಲ ಅನ್ನುವುದು ನನ್ನ ಆಶಾವಾದ.


ಪುಸ್ತಕ : ನೀನಾ ಪಾಕಿಸ್ತಾನ

ಮೂಲ : ಅಮೀರ್ ಮೀರ್

ಅನುವಾದ : ರವಿ ಬೆಳಗೆರೆ

ಪುಟಗಳು : 277+26

ಪ್ರಕಾಶನ : ಭಾವನಾ ಪ್ರಕಾಶನ

ಬೆಲೆ : 150 ರೂ.

Wednesday, February 4, 2009

ಕಣ್ಣ ಕಣಿವೆಗೆ ಎಚ್.ಎಸ್. ಶಿವ ಪ್ರಕಾಶ್ ಅವರು ಬರೆದ ಮುನ್ನುಡಿ


ಶ್ರೀಮತಿ ರೇಣುಕಾ ನಿಡುಗುಂದಿ ಅವರ ಚೊಚ್ಚಿಲು ಕವಿತಾಸಂಗ್ರಹಕ್ಕೆ ಮುನ್ನುಡಿ ಬರೆದುಕೊಡಿ ಎಂದು ದೆಹಲಿ ಕನ್ನಡ ಸಂಘದ ಅಧ್ಯಕ್ಷ ಡಾ. ಬಿಳಿಮಲೆ ಅವರು ಸ್ನೇಹಪೂರ್ವಕ ಆಗ್ರಹ ಮಾಡುತ್ತಿದ್ದಾರೆ. ಸ್ವತಃ ಬರಹಗಾರ್ತಿಯವರು ಅವರ ಮಾತಿಗೆ ದನಿಗೂಡಿಸಿದ್ದಾರೆ. ಒಲ್ಲೆ ಅನ್ನಲಾಗದೆ ಈ ಕೆಲವು ಮಾತುಗಳನ್ನು ಬರೆಯತೊಡಗಿದ್ದೇನೆ.
ಮುನ್ನುಡಿ ಆಶೀರ್ವಚನಗಳಿಂದ ಯಾವ ಕವಿಯೂ ಉಧ್ಧಾರವಾಗುವುದಿಲ್ಲ ಅಂತ ನನಗೆ ಗೊತ್ತಿದೆ. ಕವಿತೆ ತನ್ನನ್ನು ತಾನೇ ಕಾಯ್ದುಕೊಳ್ಳಬೇಕು ನಮ್ಮ ಗದ್ಯಮಯ ಯುಗದಲ್ಲಿ. ಕವಿತೆಗೆ ಬದ್ಧರಾದವರಿಗೆ ಭೌತಿಕವಾಗಿ ಇವೊತ್ತು ಸಿಕ್ಕೋದು ಅಷ್ಟಕ್ಕಷ್ಟೆ: ಚೂರುಪಾರು ತಾರೀಫು, ಅಪರೂಪಕ್ಕೆ ವಿಮರ್ಶಕರ ಮೆಚ್ಚುಮಾತು, ಲಾಬಿ ಮಾಡುವವರಿದ್ದರೆ ಯಾವುದೋ ಜುಜುಬಿ ಅಕಾಡೆಮಿ ಬಹುಮಾನ ಪ್ರಶಸ್ತಿ. ರಶ್ಯನ್ ಕವಯತ್ರಿ ಅನಾ ಅಖಮತೋವಾ ಕವಿತೆಯನ್ನು 'ಕೃತಘ್ಞ ಕಲೆ' ಅಂತ ಕರೆದಿದ್ದಳು. ಆ ಮಾತು ಎಂದಿಗಿಂತಲೂ ಇಂದು ನಿಜ.
ಹೀಗಾಗಿ ಕವಿತೆ ಅನ್ನೋದು ಇವೊತ್ತು ಅಂಥಾ ಫಾಯಿದೆ ತರುವ ಕೆಲಸವಲ್ಲ. ನಮ್ಮ ಜರೂರಿಗಾಗಿ ನಾವೇ ಕಟ್ಟಿಕೊಂಡ ಆಸೆಯ ಕನಸುಗಳ ಕಟ್ಟಡ, ಅಷ್ಟೆ. ಹೀಗೆ ನಮ್ಮ ಜರೂರಿಗಾಗಿ ನಾವೇ ಸೃಜಿಸಿದ್ದು ಇನ್ನೊಬ್ಬ ಸಹೃದಯನಿ/ಳಿಗೆ ತನ್ನದೆನಿಸಿದರೆ ಅದೇ ಅದರ ಸಾರ್ಥಕತೆ.
ಕಳೆದ ಕೆಲವು ದಶಕಗಳಲ್ಲಿ ಕನ್ನಡ ಕಾವ್ಯದಲ್ಲಿ ನನಗೆ ಹೊಸಾ ತೆರಪುಗಳು ಕಾಣುತ್ತಿರುವುದು ಹೆಂಗಸರು ಬರೆದ ಕಾವ್ಯದಲ್ಲಿ. ಇಲ್ಲಿ ನಾನು ಸಾಧ್ಯತೆಗಳ ಬಗ್ಗೆ ಮಾತಾಡುತ್ತಿದ್ದೇನೆಯೇ ಹೊರತು ಸಿಧ್ಧಿಯ ಬಗ್ಗೆ ಅಲ್ಲ.. ಯಾಕೆಂದರೆ ಕಾವ್ಯದ ಗಂಡು ಸಾಧ್ಯತೆಗಳು ಎಂದೋ ಬರಡಾಗಿ ಹೋಗಿವೆ. ಅದ್ದರಿಂದಲೆ ಏನೋ ಕಳೆದ ಕೆಲವು ದಶಕಗಳ ಕನ್ನಡ ಕವಿತೆಯ ಚಿರಂತನ ಸಾಲುಗಳು ಹೆಂಗರುಳಿನವಾಗಿವೆಯೇ ಹೊರತು ಗಂಡುಮೆಟ್ಟಿನವಾಗಿಲ್ಲ. ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಹೆಂಗಸರು ಕಾವ್ವ ರಚನೆಗೆ ತೊಡಗುತ್ತಿದ್ದಾರೆ. ಗಂಡು ಪೂರ್ವಾಗ್ರಹಗಳನ್ನು ಬುಡಸಮೇತ ಹಿಡಿದು ಅಲ್ಲಾಡಿಸುವ, ಹೆಂಬಯಕೆಗಳನ್ನು ಒಮ್ಮೆ ಮೆಲುದನಿಯಲ್ಲಿ ಒಮ್ಮೆ ಕಠೋರವಾಗಿ ಕೇಳಿಸಿಕೊಳ್ಳುವಂತೆ ಮಾಡುವ ಕವಿತೆಗಳು ಈ ಅವಧಿಯಲ್ಲಿ ಗಮನಾರ್ಹವಾಗಿ ಬಂದಿವೆ. ಕನ್ನಡ ಕಾವ್ಯದ ಕೊನೆಯ ವಿದ್ಯಾರ್ಥಿಯಾಗಿ ನಾನೂ ಅದರಿಂದ ಬಹಳ ಕಲಿತಿದ್ದೇನೆ. ಈ ಚೌಕಟ್ಟಿನಲ್ಲಿ ರೇಣುಕಾ ಅವರ ಕವಿತೆಗಳನ್ನು ಕೆಲವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ.
ಶ್ರೀಮತಿ ರೇಣುಕಾ ನಿಡಗುಂದಿ ಅವರ ಕವಿತೆಗಳಿಗೆ ಪ್ರವೇಶಿಕೆಯಾಗಿ ಈ ಕೆಳಗಿನ ಸಾಲುಗಳನ್ನು ಉದಾಹರಿಸುತ್ತಿದ್ದೇನೆ.

1)
ನೀನಗಲುವ ಮುನ್ನ ನನ್ನ ಅಂತಿಮ
ಯಾತ್ರೆಯಾಗಬಾರದಿತ್ತೆ ?
ಸಾವಿರಾರು ಜನ ನರಳುವ ಬದಲು
ನಾನೊಬ್ಬಳೇ ಆ ಭೋಪಾಲದ
ಭೀಕರತೆಗೆ ಸಿಗಬೇಕಿತ್ತು.
(ವೈರುಧ್ಯ)

2)
ಹಗಲ ಹೆತ್ತ ಮುಗಿಲು ಇನ್ನೂ ಹಸೀ ಬಾಣಂತಿ
ಎಳೆ ಎಳೆ ಬಿಸಿಲಿಗೆ ಮೈ ಕಾಸಿಕೊಳ್ಳುತ್ತಿದೆ.
(ಬೆಳಕು ಬಿತ್ತುವ ಕಾಲ)

ಈ ರೀತಿಯ ಸಾಲುಗಳು ಶ್ರೀಮತಿ.ರೇಣುಕಾ ನಿಡಗುಂದಿ ಅವರ ಕಾವ್ಯ ಸಾಮಥ್ರ್ಯದ ಮುಕುರಗಳಾಗಿವೆ. ಆದರೆ ಇಂಥ ಸಾರ್ಥಕತೆ ಎಲ್ಲ ಕವಿತೆಗಳಲ್ಲೂ ಸಮಾನವಾಗಿ ಸಂಭವಿಸುತ್ತದೆ ಎಂದಲ್ಲ. ಕಾವ್ಯಭéಾಷೆಯನ್ನು ಶಿಸ್ತುಬದ್ಧವಾಗಿ ಅಭ್ಯಾಸ ಮಾಡಿದ ಕವಿಯತ್ರಿ ಅವರಲ್ಲ. ಸಹಜ ಪ್ರತಿಭೆಯ ಸೆಳೆತದಿಂದ ಕಾವ್ಯದ ದಂಡೆಗೆ ಬಂದವರು. ಯಾವಾಗ ಭಾಷೆಯ ಎಚ್ಚರ ಮತ್ತು ತೀವ್ರತೆ ಕೈಕೊಡುತ್ತದೋ ಆವಾಗ ಅವರು 'ಪ್ರಕೃತಿ ಪ್ರಣಯ'ದಂಥ ಕವಿತೆಗಳನ್ನು ಬರೆದುಬಿಡುತ್ತಾರೆ. ಹಾಗಲ್ಲದ ಒಳ್ಳೆ ರಚನೆಗಳಲ್ಲೂ ಕೂಡ ಹಂಸಲೇಖಾಮಯ ಕ್ಲೀಷಾ ಪ್ರಪಂಚದ ಹಾಲು, ಚಂದಿರ, ಮಧು, ಜೀವನಪ್ರೀತಿ ಇತ್ಯಾದಿ ಸವಕಲು ಪ್ರತಿಮೆಗಳು ಕವಿತೆಯೊಳಗೆ ನುಸುಳಿಕೊಂಡು ಬಿಡುತ್ತವೆ. ಆದರೆ ಬಹುಪಾಲು ಕವಿತೆಗಳಲ್ಲಿ ಹಾಗಾಗುವುದಿಲ್ಲ. ಭಾವದ ಉತ್ಕಟತೆಯಿಂದಲೋ ಪ್ರತಿಭೆಯ ಪ್ರಭಾವದಿಂದಲೋ ಸಹಜವಾಗಿ ಕಾಣುವ ಈ ಕವಿತೆಗಳು ಸ್ವಯಂಪೂರ್ಣವಾದ ರೂಪಗಳನ್ನು ತಾಳಿ ಬರುತ್ತವೆ.
ಉದಾ : 'ನಾವಿಬ್ಬರೂ ನಮಗೊಂದೆ' ಕವಿತೆಯ ಪ್ರತಿಮಾ ಪ್ರಧಾನತೆ ; 'ನಿನ್ನ ನೆನಪು', 'ಜೋಡು ದೀಪ' ಕವಿತೆಗಳ ಭಾವಗೀತಾತ್ಮಕತೆ ; 'ನೀನಾದ ನಿನಾದ' ಮತ್ತು 'ಅಂತರ್ಯ' ಕವಿತೆಗಳ ಗುಂಗುಂನಾದ ; ಇದಕ್ಕಿಂತಲೂ ಮುಖ್ಯವಾಗಿ 'ಚಂದ್ರ ಮತ್ತು ಬುದ್ಧಪೂಣರ್ಿಮೆ', 'ಹಾರಿಹೋದ ಹಕ್ಕಿಗಳು' ಮತ್ತು ಬೆಳಕು ಬಿತ್ತುವ ಕಾಲ ಇತ್ಯಾದಿ ಕೊನೆಯ ಕವಿತೆಗಳ ಆತ್ಮ ನಿವೇದಾತ್ಮಕತೆ ಮತ್ತು ವ್ಯಾಪಕತೆ- ಇಷ್ಟೊಂದು ಕಾವ್ಯ ಸಾಧ್ಯತೆಗಳು ಮೊದಲ ಕವಿತಾ ಗುಚ್ಛದಲ್ಲೇ ಚಲ್ಲವರಿಯುವುದು ಯಾವುದೇ ಚೊಚ್ಚಿಲು ಸಂಕಲನದಲ್ಲಿ ತೀರಾ ಅಪರೂಪದ ಮಾತು. ಆದ್ದರಿಂದ ರೇಣುಕಾ ಅವರ ಕವನಗಳು ಅಭಿನಂದನೀಯ.
ಪ್ರಾಚೀನ ತಮಿಳು ಕಾವ್ಯ ಮೀಮಾಂಸೆ ಕಾವ್ಯದ ಎರಡು ತುದಿಗಳನ್ನು ಗುರುತಿಸಿತ್ತು. ಹೆಂಗಸಿನ ಜಗತ್ತಿನ ಒಳ ಕವಿತೆಯನ್ನು ಅಗಂ ಎಂದೂ, ಗಂಡು ತುರ್ತುಗಳ ಹೊರ ಕವಿತೆಯನ್ನು ಪುರಂ ಎಂದೂ ಕರೆಯಿತು. ಆದರೆ ಹಾಗೆ ಮಾಡಿದ್ದು ಬಿಚ್ಚು ನೋಟದ ಸಲೀಸಿಗಾಗಿ. ಒಳ ಕವಿತೆ ಹೊರ ತುರ್ತುಗಳಲ್ಲಿ ಮೈದಾಳದೇ ಹೋದರೆ, ಅಥವಾ ಹೊರಗವಿತೆ ಒಳ ತುಡಿತಗಳಿಂದ ಮಿಡಿಯದೇ ಹೋದರೆ ಕವಿತೆಯ ಜೀವ ದೇಹಗಳು ಒಂದಾಗುವುದಿಲ್ಲ. ಇತ್ತಿತ್ತಲಾಗಿನ ಕನ್ನಡ ಕಾವ್ಯದ ತೊಂದರೆ ಇರುವುದು ಇಲ್ಲಿಯೆ. ಕೆಲವು ಸಲ ಗೊಣಗುಡುವಿಕೆಯಾಗಿ ಇನ್ನು ಕೆಲವು ಸಲ ಅಬ್ಬರವಾಗಿ ಕವಿತೆ ಸೋತು ಬಿಡುತ್ತದೆ. ಆದರೆ ಶ್ರೀಮತಿ ರೇಣುಕಾ ಅವರು ಒಳ -ಹೊರಗುಗಳಿಂದನ್ನೂ ಕವಿತೆಯ ನೇಯ್ಗೆ ಒಳಗೆ ಹೆಣೆಯುತ್ತಿರುವುದರಿಂದ ಅವರು ತಮ್ಮ ಕಾವ್ಯಯಾತ್ರೆಯನ್ನು ಸರಿಯಾದ ರೀತಿಯಲ್ಲೇ ಶುರು ಮಾಡಿದ್ದಾರೆ ಎಂದು ನನ್ನ ನಂಬುಗೆ.
ಆದ್ದರಿಂದ ಅವರು ಕನ್ನಡ ಕಾವ್ಯದ ಮಂಡೆಗೆ ಹೂವು ತರುವರೇ ಹೊರತು ಹುಲ್ಲು ತರುವರಲ್ಲ.

- ಎಚ್ ಎಸ್ ಶಿವಪ್ರಕಾಶ

Sunday, February 1, 2009

ಬಿಳಿಮಲೆಯವರ ಜನ ಸಂಸ್ಕೃತಿ


ಡಾ. ಪುರುಷೋತ್ತಮ ಬಿಳಿಮಲೆಯವರು ನಮ್ಮ ನಡುವೆ ಇರುವ ಒಬ್ಬ ಸೂಕ್ಮ ಮನಸ್ಸಿನ, ಜಾನಪದ ವಿದ್ವಾಂಸರು. ಉತ್ತಮ ಆಡಳಿತಗಾರರೂ, ಸಂಘಟಕರೂ ಹೌದು ಎಂಬುದನ್ನು ಅವರು ದೆಹಲಿ ಕರ್ನಾಟಕ ಸಂಘವನ್ನು ನಡೆಸಿಕೊಂಡು, ಒಂದು ಹಂತಕ್ಕೆ ತಂದದ್ದೇ ಸಾಕ್ಷಿ. ಬಿಳಿಮಲೆಯವರ 'ಜನ ಸಂಸ್ಕೃತಿ' ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಜನ ಸಂಸ್ಕೃತಿ ಪುಸ್ತಕದ ವಿಮರ್ಶೆ 'ಪ್ರಜಾವಾಣಿ'ಯಲ್ಲಿ ಪ್ರಕಟವಾಗಿದೆ.
ಅದನ್ನೇ ಯಥಾವತ್ ಇಲ್ಲಿ ಪ್ರಕಟಿಸಲಾಗಿದೆ.

(ವಿಮರ್ಶೆ ದೊಡ್ಡ ಪುಟದಲ್ಲಿ ನೋಡಲು, ಅದರ ಮೇಲೆ ಕ್ಲಿಕ್ ಮಾಡಿ.)