Tuesday, February 24, 2009

ಸದ್ಭಾವ



ಕವಿ ಚೆನ್ನವೀರ ಕಣವಿಯವರ ಮುನ್ನುಡಿ, ಬೆನ್ನುಡಿಗಳನ್ನು ಹಾಗೂ ಕೆಲವು ಹಿರಿಯರು, ಕಿರಿಯರ ಕುರಿತಾದ ಸಾಂದರ್ಭಿಕವಾಗಿ ಬರೆದ ಲೇಖನಗಳನ್ನು ಒಳಗೊಂಡ ಸಂಗ್ರಹ ಇದು. ಈ ಮೊದಲು ಅವರ ಮುನ್ನುಡಿಗಳದೇ ಒಂದು ಸಂಗ್ರಹ `ಶುಭ ನುಡಿಯೆ ಹಕ್ಕಿ‘ ಪ್ರಕಟವಾಗಿತ್ತು.
ಸ.ಸ.ಮಾಳವಾಡ, ಬೆಟಗೇರಿ ಕೃಷ್ಣಶರ್ಮ, ಬಸವರಾಜ ಸಾದರ ಮುಂತಾದ ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅಷ್ಟೇನೂ ಪ್ರಸಿದ್ಧರಲ್ಲದ ಲೇಖಕರಿಗೂ ಬೆನ್ನುತಟ್ಟಿ ಅವರು ಮುನ್ನುಡಿಗಳನ್ನು ಬರೆದಿರುವುದನ್ನು ನೋಡಬಹುದು.
ಇಲ್ಲಿ ಕುತೂಹಲಕಾರಿಯಾಗಿರುವುದು ಶೆ.ಗೋ.ಕುಲಕರ್ಣಿಯವರ `ನಾ ಕಂಡ ಗೆಳೆಯರ ಗುಂಪು‘ ಪುಸ್ತಕಕ್ಕೆ ಬರೆದ ಬೆನ್ನುಡಿ. ಈ ಪುಸ್ತಕ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ಮೂರೂ ಸಂಪುಟಗಳಿಗೆ ಅವರು ಪ್ರತ್ಯೇಕ ಬೆನ್ನುಡಿಗಳನ್ನು ಬರೆದಿದ್ದಾರೆ. ತರುಣ ಬರಹಗಾರರಿಗೆ ಹಾರೈಕೆ, ಅಭಿನಂದನೆಗಳನ್ನು ಕಣವಿಯವರು ಮಾಡಿದ್ದಾರೆ. ಕೆಲವು ಹಿರಿಯ ಲೇಖಕರ ಕೃತಿಗಳಿಗೆ ಬರೆದ ಬೆನ್ನುಡಿ, ಮುನ್ನುಡಿಗಳನ್ನು ಹೊರತುಪಡಿಸಿದರೆ ಒಂದು ಕಾಲಘಟ್ಟದ ಸಾಹಿತ್ಯ ಸಂದರ್ಭವನ್ನು ಅರಿಯಲು ಈ ಪುಸ್ತಕ ಸಹಕಾರಿಯಾಗುವಂತಿದೆ.
`ವ್ಯಕ್ತಿ ಶಕ್ತಿ : ನನಗೆ ಕಂಡಷ್ಟು : ಭಾಗದಲ್ಲಿ ಜಿ. ನಾರಾಯಣ, ಚದುರಂಗ, ಗೊರೂರು ಮುಂತಾದವರ ವ್ಯಕ್ತಿತ್ವವನ್ನು ರೇಖಿಸಿದ್ದಾರೆ. ಸಂಕೀರ್ಣ ಭಾಗದಲ್ಲಿ ಮಧುರ ಚೆನ್ನರ ಕಾವ್ಯದ ಬಗ್ಗೆ, `ಜಾನಪದ ದೀಪಾರಾಧನೆ ಸಮಾರಂಭ‘ ಮುಂತಾದ ವಿಶೇಷ ಸಂಗತಿಗಳ ಬಗ್ಗೆ ಬರೆದಿದ್ದಾರೆ. ಇಲ್ಲಿ ಅವರ ಒಂದು ಅನುವಾದವೂ ಇದೆ. ಚೀನಾದ ತತ್ವಜ್ಞಾನಿ ಲಿನ್ ಯು ಟಾಂಗ್ ನ `ದಿ ಇಂಪಾರ್ಟನ್ಸ್ ಆಫ್ ಲಿವಿಂಗ್‘ ಎಂಬ ಪುಸ್ತಕದ ಕೆಲವು ಅಧ್ಯಾಯಗಳನ್ನು ಅನುವಾದ ಮಾಡಿದ್ದಾರೆ. ಈ ಅನುವಾದ ಸುಂದರವಾಗಿದೆ. ಇಲ್ಲಿ ಕಣವಿಯವರು ಬರೆದಿರುವ ಬಹುಪಾಲು ಲೇಖಕರು ಉತ್ತರ ಕರ್ನಾಟಕದವರು ಎನ್ನುವುದು ಕುತೂಹಲಕಾರ.
ಕಣವಿಯವರ ಶೈಲಿ ತಿಳಿನೀರಿನಂತೆ ಪಾರದರ್ಶಕವಾಗಿರುವಂಥದ್ದು. ಅದು ಅವರ ಎಂದಿನ `ಸದ್ಭಾವ‘ದಿಂದ ಇನ್ನಷ್ಟು ಕಳೆಗಟ್ಟಿದೆ.

ಶೀರ್ಷಿಕೆ: ಸದ್ಭಾವ ಲೇಖಕರು: ಚೆನ್ನವೀರ ಕಣವಿ ಪ್ರಕಾಶಕರು: ಸಂವಹನ ಪುಟಗಳು: 216 ಬೆಲೆ:ರೂ.150/-

ಕೃಪೆ : ಪ್ರಜಾವಾಣಿ

No comments: