Wednesday, May 13, 2009

ಮುಸ್ಸಂಜೆ ಮುಖಾಮುಖಿಯಾದ ಚಂದ್ರಶೇಖರ್

ಈ ಟಿವಿ ಕನ್ನಡ ವಾಹಿನಿಯ ಮುಖ್ಯಸ್ಥರಲ್ಲೊಬ್ಬರಾಗಿರುವ ಶ್ರೀ ಚಂದ್ರಶೇಖರ್ ಅವರದ್ದು ಕವಿ ಮನಸ್ಸು. ಪ್ರಾಯಶ: ಕವಿತೆ,ಕವನಗಳ ಬಗ್ಗೆ ಅವರು ಬ್ಲಾಗಿಸಿದಷ್ಟು ಮತ್ತೆ ಯಾರಾದರೂ ಬ್ಲಾಗಿಸಿರುವುದು ನನಗೆ ಗೊತ್ತಿಲ್ಲ. ಇತ್ತೀಚೆಗೆ ಅವರ ಮೊದಲ ಕವನ ಸಂಕಲನ “ಮುಸ್ಸಂಜೆಯ ಮುಖಾಮುಖಿ” ಬೆಂಗಳೂರಿನ ಯವನಿಕಾದಲ್ಲಿ ನಡೆಯಿತು. ಖ್ಯಾತ ಸಾಹಿತಿ ಹಾಗು ನಾಟಕಕಾರರಾದ ಡಾ.ಎಚ್. ಎಸ್.ವೆಂಕಟೇಶಮೂರ್ತಿಯವರು
ಪುಸ್ತಕ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಪ್ರೊ.ಬರಗೂರು ರಾಮಚಂದ್ರಪ್ಪ, ಖ್ಯಾತ ಚಿಂತಕರು ಹಾಗು ಚಲನಚಿತ್ರ
ನಿರ್ದೇಶಕರು, ವಿಶೇಷ ಅತಿಥಿಗಳಾಗಿ ಡಾ.ನಟರಾಜ್ ಹುಳಿಯಾರ್ ಹಾಗೂ ಇತರರು ಆಗಮಿಸಿದ್ದರು. ಕಾರ್ಯಕ್ರಮದ ಕೆಲ ಫೋಟೋಗಳು, ಪುಸ್ತಕದ ಮುಖಪುಟ, ಹಾಗೂ ಎರಡು ಸ್ಯಾಂಪಲ್ ಕವನಗಳು ಇಲ್ಲಿವೆ. ಹೆಚ್ಚಿನ ಕವನಗಳಿಗೆ ಅವರ ಬ್ಲಾಗ್ http://www.koogu.blogspot.com/
ಇಲ್ಲಿಗೆ ಭೇಟಿ ನೀಡಬಹುದು.








ಅನಂತ ಮೌನ
ಈ ಅನಂತ
ಮೌನ
ಚಿಂತನ, ಮಂಥನ
ಚಿರಯೌವನ.

ಬಿರುಗಾಳಿಗೆ ಮೈಯೊಡ್ಡಿ
ಭೋರ್ಗರೆವ ಅಲೆಗಳ
ಮೇಲೆ ರುದ್ರನರ್ತನ.

ಕಾಲಗರ್ಭದ ಮಿತಿ
ಭಾವ, ಬಂಧು
ಸಿಂಧೂರ ಸೌಂಧರ್ಯ
ನಿಸರ್ಗ ಚಿತ್ತದ ಜೊತೆ ಸರಸ.

ಈ ಹಾದಿಯಲ್ಲೆಲ್ಲಾ
ಕಲ್ಲು, ಮುಳ್ಳು
ಸಾಲು ಮರಗಳ
ನೆರಳು.

ಪಾಪಿಷ್ಟ, ಕೋಪಿಷ್ಟ
ಸಾಧು, ಸಂತ
ಇಳೆಗೆ ಎಲ್ಲವೂ
ಮೀಸಲು.

ನೀರವ ಮೌನ
ಒಮ್ಮೆಗೇ
ಬಿರುಗಾಳಿಯ
ಆಕ್ರಂದನ
ಮತ್ತದೇ ಮೌನ.


ಕವಿಗೂ ಉಂಟು ಒಂದು ಸ್ಧಾನ
ಮೋಡ ತಡೆದು
ಮಳೆ ಸುರಿಸಿದ
ಬೆಟ್ಟಕ್ಕೆ
ನೀರಿನ ಅಭಾವ.

ಬೆಟ್ಟದಿಳಿಜಾರಿನಲಿ
ನೀರು ನಿಲ್ಲಲು
ಸಾಧ್ಯವೆ?
ತಡೆಗೋಡೆ ವಿರಳ.

ಕೆಳಗೆಲ್ಲೋ
ಕಟ್ಚಲೂ ಬಹುದೊಂದು
ಅಣೆಕಟ್ಟು
ಅದಕ್ಕೇನು ಲಾಭ?

ಆದರೂ ಅದಕ್ಕೆ
ನಿಶ್ಚಿಂತೆ
ಇಲ್ಲ ಕಿಂಚಿತ್ತು
ಹಸಿರಿನ ಕೊರತೆ.

ಕುಡಿಯಲು ನೀರು
ಉರಿಬಿಸಿಲಿಗೆ ನೆರಳು
ಕಲ್ಲುಗುಂಡುಗಳಡಿ
ಬೀಸುವ ತಂಗಾಳಿ.

ಇಲ್ಲಿ ಜಾರುವ ಕವಿಗೂ
ಉಂಟು ಒಂದು ಸ್ಧಾನ.

No comments: